

ರಾಜ್ಯ ಸರ್ಕಾರ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಿರುವ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ಪ್ರಯಾಣ ದರ ಹೆಚ್ಚಳದ ಹೊರೆ ಏನಿದ್ದರೂ ಜನಕ್ಕೆ ತಾನೇ, ಮಂತ್ರಿಗಳಿಗೆ ಅಲ್ಲವಲ್ಲ. ಅವರಿಗೇನಾಗಬೇಕು? ಜನರ ಜೇಬಿಗೆ ಕೈ ಹಾಕಿ ಲೂಟಿ ಮಾಡುತ್ತಿದ್ದಾರೆ. ವೋಟು ಹಾಕಿ ಅಧಿಕಾರ ಕೊಟ್ಟ ಜನರಿಗೆ ಕಷ್ಟ ಕೊಟ್ಟು ಖುಷಿಪಡುತ್ತಿದ್ದಾರೆ. ಐದು ಗ್ಯಾರಂಟಿಗಳಿಗೆ ಈ ಸರಕಾರದ ಇಬ್ಬರು ಮಹನೀಯರು ಸಹಿ ಹಾಕಿದ್ದರು.
ಸಿಎಂ ಸಿದ್ದರಾಮಯ್ಯ ಅವರೂ ಸಹಿ ಮಾಡಿದ್ದರು. ಇನ್ನೊಬ್ಬ ಮಹಾನ್ ವ್ಯಕ್ತಿ ಬಗ್ಗೆ ನಾನು ಮಾತನಾಡಲ್ಲ. ನಮ್ಮ ದೇಶದಲ್ಲಿ ಡಾ.ಮನಮೋಹನ್ ಸಿಂಗ್ ಅವರ ನಂತರ ಸಿದ್ದರಾಮಯ್ಯನವರೇ ದೊಡ್ಡ ಆರ್ಥಿಕ ತಜ್ಞರಲ್ಲವೇ.? ಅವರೂ ಗ್ಯಾರಂಟಿ ಕಾರ್ಡ್ ಮೇಲೆ ಸಹಿ ಹಾಕಿದ್ದಾರೆ. ಅವರ ಸರಕಾರದಲ್ಲಿ ಜನರ ಅಭಿವೃದ್ಧಿಯಾಗುವುದು ಬಿಟ್ಟು ಮಂತ್ರಿಗಳ ಅಭಿವೃದ್ದಿ ಆಗುತ್ತಿದೆ. ಜನರ ಅಭಿವೃದ್ದಿ ಇವರಿಗೆ ಬೇಕಿಲ್ಲ. ಎಲ್ಲದಕ್ಕೂ ಪರ್ಸಂಟೇಜ್ ಕೇಳುತ್ತಾರೆ. ಆಶ್ರಯ ಮನೆಗಳಿಗೂ ವಿಧಾನಸೌಧದಲ್ಲಿ ವಸೂಲಿ ಶುರುವಾಗಿದೆ ಎನ್ನುವ ಮಾಹಿತಿ ಇದೆ ಎಂದು ಆರೋಪಿಸಿದರು.