ಬಸ್ ಪಾಸ್ ಅವಧಿ ಮುಂದುವರಿಸಿ

111
Published on

ಬೆಳಗಾವಿ: ಕಳೆದ ಶೈಕ್ಷಣಿಕ ವರ್ಷದಲ್ಲಿ ಸಾರಿಗೆ ಸಂಸ್ಥೆಯು ವಿದ್ಯಾರ್ಥಿಗಳಿಗೆ ನೀಡಿದ್ದ ಬಸ್ ಪಾಸ್ ಅವಧಿಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟುಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟಿಸಿದರು.

ಬಳಿಕ ಜಿಲ್ಲಾಡಳಿತ ಮೂಲಕ ಸಾರಿಗೆ ಸಂಸ್ಥೆ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಮನವಿ ಸಲ್ಲಿಸಿದರು. ಕರೊನಾ ಹಾವಳಿ ತಗ್ಗಿದ್ದರಿಂದ ಶಾಲಾ-ಕಾಲೇಜ್ ಭೌತಿಕ ತರಗತಿ ಆರಂಭಗೊಂಡಿವೆ. ಆದರೆ, 2020-21ನೇ ಸಾಲಿನಲ್ಲಿ ನೀಡಲಾಗಿದ್ದ ಬಸ್ ಪಾಸ್ ಅವಧಿ ಸೆ.25ಕ್ಕೆ ಮುಕ್ತಾಯವಾಗಿದೆ. ಕರೊನಾ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಮೊದಲೇ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳು ಈಗ ಪ್ರಯಾಣ ಶುಲ್ಕ ನೀಡಿ ಸಂಚರಿಸುವಂತಾಗಿದೆ. ಅಲ್ಲದೆ, ಕಳೆದ ಬಾರಿ ಬಸ್ ಪಾಸ್ ಬಳಕೆಯೂ ಆಗಿಲ್ಲ.

ಹಾಗಾಗಿ, ಪ್ರಸಕ್ತ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಈ ಪಾಸ್ ಅವಧಿ ಮುಂದುವರಿಸಿ, ಉಚಿತವಾಗಿ ಸಂಚರಿಸಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಮಹಾಂತೇಶ ಬಿಳ್ಳೂರ, ವೈಭವ ಸುತಾರ, ವಿನಾಯಕ ಮರಕಟ್ಟಿ, ಸುದೀಪ ಸುರುತಿ, ಲಖನ್ ಮುನವಳ್ಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net