ಬಸ್ ದರ ಏರಿಕೆಗೆ ಸಿಪಿಐ ಆಕ್ರೋಶ

12
Published on

ರಾಜ್ಯ ಸರ್ಕಾರ ಬಸ್ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಸಿಪಿಐ(ಎಂ) ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಡೀಸೆಲ್ ದರ ಹೆಚ್ಚಳ, ಸಿಬ್ಬಂದಿ ವೆಚ್ಚ ಹೆಚ್ಚಳದ ನೆಪದಲ್ಲಿ ಬಸ್ ದರವನ್ನು ಶೇ.15ರಷ್ಟು ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮ ಅಪ್ರಜಾಸತ್ತಾತ್ಮಕ ಮತ್ತು ಅವೈಜ್ಞಾನಿಕವಾಗಿದೆ. ಮೇಲಾಗಿ ಸಾಮಾನ್ಯ ಜನರ ವಿರೋಧಿಯಾಗಿದೆ. ಡೀಸೆಲ್ ಹೆಚ್ಚಳವಾಗಿದೆ ಎನ್ನುವ ಸರ್ಕಾರ ಡೀಸೆಲ್ ದರ ಇಳಿದಾಗ ದರಗಳನ್ನು ಎಂದಾದರೂ ಕಡಿಮೆ ಮಾಡಿದೆಯೇ? ಸರ್ಕಾರಕ್ಕೆ ನಿಜಕ್ಕೂ ವೆಚ್ಚ ಕಡಿಮೆ ಮಾಡಬೇಕೆಂದಿದ್ದರೆ ಸಾರಿಗೆ ನಿಗಮಗಳಿಗೆ ಪೂರೈಸುವ ಡೀಸೆಲ್ ದರವನ್ನು ಸಬ್ಸಿಡಿ ದರದಲ್ಲಿ ಪೂರೈಸಬೇಕು. ಇಲ್ಲವೆ ಮುಕ್ತ ಮಾರುಕಟ್ಟೆ ದರಗಳಲ್ಲಾದರೂ ಪೂರೈಸಬೇಕು. ದರ ಹೆಚ್ಚಳಕ್ಕೆ ಡೀಸೆಲ್ ದರ ಹೆಚ್ಚಳ ಕಾರಣ ಎನ್ನುವುದು ಸುಳ್ಳು ನೆಪ. ಈಗಾಗಲೇ ನಾಲ್ಕು ನಿಗಮಗಳಲ್ಲಿ ಸಿಬ್ಬಂದಿಗೆ 3 ವರ್ಷಗಳ ವೇತನ ಬಾಕಿ ನೀಡಬೇಕಿದ್ದು, ಹೊಸ ವೇತನ ಒಪ್ಪಂದ ಮಾಡಬೇಕಿದೆ. ಆದರೂ ವೇತನ ಹೆಚ್ಚಳ ನೆಪ ನೀಡಿರುವುದು ಖಂಡನೀಯ ಎಂದು ಕಿಡಿ ಕಾರಿದರು.

1950ರ ಆರ್‌ಟಿಸಿ ಕಾಯ್ದೆ ಪ್ರಕಾರ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಸರ್ಕಾರ ಬಜೆಟ್ ಬೆಂಬಲ ನೀಡುವುದು ಅಗತ್ಯ. ಸಾರ್ವಜನಿಕರ ಹಿತದೃಷ್ಟಿಯಿಂದ ಒದಗಿಸುವ ಸಾರಿಗೆಯನ್ನು ಲಾಭ ನಷ್ಟದ ಲೆಕ್ಕದಲ್ಲಿ ನೋಡಬಾರದು. ನಷ್ಟ ಉಂಟಾದಲ್ಲಿ ಸರ್ಕಾರ ಅದನ್ನು ಭರಿಸಬೇಕು. ಸಾರ್ವಜನಿಕ ಸಾರಿಗೆಗಳು ಎಲ್ಲ ಸಂದರ್ಭಗಳಲ್ಲೂ ಲಾಭ ತರಲು ಆಗುವುದಿಲ್ಲ. ಸಾರಿಗೆ ನಿಗಮಗಳ ಅರ್ಧದಷ್ಟು ಮಾರ್ಗ ಕಾರ್ಯಾಚರಣೆಗಳು ಗ್ರಾಮಾಂತರದಲ್ಲಿ ಇರುವುದರಿಂದ ಸಹಜವಾಗಿಯೇ ನಷ್ಟವಾಗುತ್ತದೆ. ಜನರ ಹಿತದೃಷ್ಟಿಯಿಂದ ಸರ್ಕಾರ ಅದನ್ನು ಭರಿಸಬೇಕು. ಅದರ ಬದಲಿಗೆ ಬೆಲೆ ಹೆಚ್ಚಳ ಮಾಡುವುದು ಜನವಿರೋಧಿ ಕ್ರಮ ಎಂದು ದೂರಿದರು.

ಸಾರಿಗೆ ನಿಗಮಗಳ ನಷ್ಟ ಕಡಿಮೆ ಮಾಡಲು ಸಾರ್ವಜನಿಕರ, ರಾಜಕೀಯ ಪಕ್ಷಗಳ ಸಲಹೆಗಳನ್ನು ಆಡಳಿತ ವರ್ಗ ಪಡೆಯಬೇಕು. ಆಡಳಿತಾತ್ಮಕ ವಿಧಾನಗಳಲ್ಲಿ ಸಾಕಷ್ಟು ನಷ್ಟ ಕಡಿಮೆ ಮಾಡಬಹುದಾಗಿದ್ದು, ದರ ಹೆಚ್ಚಳ ಉತ್ತಮ ಮಾರ್ಗವಲ್ಲ. ಎಲೆಕ್ಟ್ರಿಕ್ ಬಸ್‌ಗಳನ್ನು ನಿಗಮಗಳೇ ಕಾರ್ಯಾಚರಣೆ ಮಾಡಿದರೆ ಸಾಕಷ್ಟು ಆದಾಯ ಹೆಚ್ಚುತ್ತದೆ. ಖಾಸಗಿ ಕಂಪನಿಗಳ ಜತೆಗೆ ದುಬಾರಿ ಒಪ್ಪಂದ ಮಾಡಿಕೊಂಡು ನಿಗಮಗಳೇ ನಷ್ಟ ಉಂಟು ಮಾಡಿಕೊಳ್ಳುತ್ತಿವೆ. ನಿಗಮಗಳ ಬಸ್‌ಗಳ ಮೇಲಿನ ತೆರಿಗೆ ಕಡಿಮೆ ಮಾಡುವ ಮೂಲಕ ನಷ್ಟ ಕಡಿಮೆ ಮಾಡಬೇಕು. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ನರಳುತ್ತಿರುವ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕದೆ ದರ ಹೆಚ್ಚಳದ ತೀರ್ಮಾನವನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಎನ್.ಸುಬ್ರಹ್ಮಣ್ಯ, ಪದಾಧಿಕಾರಿಗಳಾದ ರಾಜೇಂದ್ರ, ವಿಜಯಕುಮಾರ್, ಬಾಲಾಜಿರಾವ್, ಜಯರಾಂ, ಕೆ.ಬಸವರಾಜ್, ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net