ಬಸವ ಪ್ರತಿಮೆ ಅನುದಾನ ಅಪವ್ಯಯ?

basavanna2
Published on

ಚಿತ್ರದುರ್ಗ: ಮುರುಘಾಮಠದ ಹಿಂಭಾಗದಲ್ಲಿ ಬಸವ ಪ್ರತಿಮೆ ನಿರ್ಮಾಣ ಸಂಬಂಧ ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಸಮರ್ಪಕವಾಗಿ ಬಳಕೆಯಾಗಿಲ್ಲ ಎಂದು ಪರಿಶೀಲನಾ ವರದಿ ಹೇಳಿದೆ.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರನ್ನು ಒಳಗೊಂಡ ಐವರ ಸಮಿತಿ ಮಂಗಳವಾರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಸಲ್ಲಿಸಿರುವ ವರದಿ ಸಮಗ್ರ ತನಿಖೆಗೆ ಷರಾ ಬರೆದಿದೆ.

ಸಮಿತಿಯೂ ಅಚ್ಚುಕಟ್ಟಾಗಿ ಪರಿಶೀಲಿಸಿ ಮೇಲ್ನೋಟಕ್ಕೆ ಕಂಡು ಬಂದ ಅಂಶಗಳನ್ನಷ್ಟೇ ದಾಖಲಿಸಿದೆ. ಆದರೆ, ಕಾಮಗಾರಿ ಸಂಬಂಧ ಭೌತಿಕ ಹಾಗೂ ತಾಂತ್ರಿಕ ಅಂಶಗಳ ಪರಿಗಣನೆ ಆಧಾರದಲ್ಲಿ ತನಿಖೆ ನಡೆಸುವ ಉಸಾಬರಿಗೆ ಹೋಗಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ.

ಬಸವ ಪ್ರತಿಮೆ ನಿರ್ಮಿಸಲು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದ 35 ಕೋಟಿ ರೂ. ಅನುದಾನಕ್ಕೂ ಪ್ರತಿಮೆ ಸ್ಥಳದಲ್ಲಾಗಿರುವ ಈವರೆಗಿನ ಕಾಮಗಾರಿಗೂ ತಾಳೆಯಾಗಿಲ್ಲ. ಅನುದಾನ ಸಮರ್ಪಕವಾಗಿ ಖರ್ಚು ಮಾಡಿರುವ ಕುರಿತು ಸೂಕ್ತ ದಾಖಲೆ ಒದಗಿಸಿಲ್ಲ. ಹೀಗಾಗಿ ಸರ್ಕಾರದಿಂದಲೇ ಸಮಗ್ರ ತನಿಖೆ ನಡೆಸಲು ಉಪ ಸಮಿತಿ ಷರಾ ಬರೆದಿದೆ.

ಮುರುಘಾಮಠದಿಂದ ಮಹಾಮಾನವತಾವಾದಿ ಬಸವೇಶ್ವರರ 375 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅಂದಾಜು 280.20 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಆದರೆ, ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನ ಆರಂಭ ಹಂತದಲ್ಲೇ ಬಳಸಲಾಗಿದೆ. ಈವರೆಗೂ ಅತ್ಯಂತ ಕಡಿಮೆ ಪ್ರಗತಿ ಸಾಧಿಸಿದ್ದು, ಮುಂಬರುವ ದಿನಗಳಲ್ಲೂ ಕಾಮಗಾರಿ ವೇಗ ಪಡೆಯುವ ಸಾಧ್ಯತೆ ಕಡಿಮೆ ಇದೆ ಎಂಬ ಅಂಶಗಳು ವರದಿಯಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net