

ಬಸವಕಲ್ಯಾಣ: ಜಾಗತಿಕ ಮೌಲ್ಯಗಳನ್ನು ಒಳಗೊಂಡಿರುವ ಬಸವ ತತ್ವ ವಿಶ್ವವ್ಯಾಪಿಯಾಗಬೇಕು ಎಂದು ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಸದಾಶಯ ವ್ಯಕ್ತಪಡಿಸಿದರು.
ಗುರುಬಸವ ಫೌಂಡೇಷನ್ ಹೈದರಾಬಾದ್ ಹಾಗೂ ಚನ್ನಬಸವೇಶ್ವರ ಜ್ಞಾನಪೀಠ ಬೆಂಗಳೂರು ಸಹಯೋಗದಡಿ ಹೈದರಾಬಾದ್‌ನಿಂದ ಲಂಡನ್‌ವರೆಗೆ ಮಹಾತ್ಮ ಬಸವೇಶ್ವರ, ಮಹಾತ್ಮಗಾಂಧಿ ವಿಶ್ವಶಾಂತಿ ಯಾತ್ರೆಗೆ ಕರ್ನಾಟಕದಲ್ಲಿ ನಗರದ ಪವಿತ್ರ ಪರುಷ ಕಟ್ಟೆಯಲ್ಲಿ ಭಾನುವಾರ ಆಯೋಜಿಸಿದ್ದ ಚಾಲನೆ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು.
ಶರಣ ಧರ್ಮ ನುಡಿಯುವ ಬದಲು ನಡೆಯುವ ಧರ್ಮ, ನಡೆ-ನುಡಿ ಒಂದಾಗಿಸಿಕೊಂಡು ಬದುಕುವ ಧರ್ಮ. ಮನೆಗಳು ಮಠಗಳಾಗಬೇಕು. ಮನಸ್ಸಿನಲ್ಲಿ ಬಸವ ತತ್ವ ತುಂಬಿರಬೇಕು. ವಚನಗಳನ್ನು ಓದಿ ಅರ್ಥ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಶಾಂತಿ, ನೆಮ್ಮದಿ, ಸಾರ್ಥಕ್ಯ ಕಂಡುಕೊಳ್ಳಲು ಸಾಧ್ಯ ಎಂದರು.
ಶ್ರೀ ಹವಾ ಮಲ್ಲಿನಾಥ ಮಹಾರಾಜರು ನಿತ್ಯ ಸಂಚಾರಿ. ಬಸವ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಿವ ಪೂಜ್ಯರು ನಿತ್ಯ ದಾಸೋಹ ಮೂಲಕ ದಾಸೋಹ ಪರಂಪರೆ ಮುಂದುವರಿಸಿಕೊಂಡು ಬರುತ್ತಿದ್ದಾರೆ ಎಂದು ಬಣ್ಣಿಸಿದರು.
ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಶ್ರೀ ಡಾ.ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಬಸವ ತತ್ವ ಪ್ರಚಾರ-ಪ್ರಸಾರ ಉದ್ದೇಶದಿಂದ ನಾಲ್ಕು ವರ್ಷಗಳಿಂದ ಅಂತಾರಾಷ್ಟ್ರೀಯ ಬಸವತತ್ವ ಸಮಾವೇಶ ಪ್ರತಿವರ್ಷ ಆಯೋಜಿಸಲಾಗುತ್ತಿದೆ. ಈಗಾಗಲೇ ನೇಪಾಳ, ಭೂತಾನ್, ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಸಮಾವೇಶ ನಡೆದಿದ್ದು, ೫ನೇ ಸಮಾವೇಶ ಲಂಡನ್‌ನಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಜೈಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಹವಾ ಮಲ್ಲಿನಾಥ ಮಹಾರಾಜ ಚಾಲನೆ ನೀಡಿ ಯಾತ್ರೆ ಹಾಗೂ ಸಮಾವೇಶ ಯಶಸ್ವಿಯಾಗಲಿ ಎಂದು ಹಾರೈಸಿದರು.
ಗುರುಬಸವ ಫೌಂಡೇಷನ್‌ನ ಡಾ.ನಾಗನಾಥ ಪಾಟೀಲ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ್ ಅತಿವಾಳ, ಬಸವದಳ ರಾಷ್ಟ್ರೀಯ ಕಾರ್ಯದರ್ಶಿ ರವಿಕಾಂತ ಬಿರಾದಾರ, ಜೈ ಭಾರತ ಮಾತಾ ಸೇವಾ ಸಮಿತಿ ಭಾಲ್ಕಿ ತಾಲೂಕು ಅಧ್ಯಕ್ಷ ಪಪ್ಪು ಪಾಟೀಲ್ ಖಾನಾಪುರ, ಮಾಣಿಕ ಮೇತ್ರೆ, ಸುಧಾಕರ ಜಹೀರಾಬಾದ್, ಅಜಯ ಸೋಲಾಪುರೆ, ಅಮೃತ ಮಂಠಾಳ ಇತರರಿದ್ದರು.
ಇಂಗ್ಲೆಂಡ್‌ನ ಥೇಮ್ಸ್ ನದಿ ತೀರದಲ್ಲಿರುವ ಬಸವೇಶ್ವರ ಮೂರ್ತಿ ಬಳಿ ಮೇ ೫ರಂದು ಬಸವ ಅಂತಾರಾಷ್ಟ್ರೀಯ ಸಮಾವೇಶ ಮತ್ತು ಗುರುಬಸವ ಜಯಂತಿ ಹಮ್ಮಿಕೊಳ್ಳಲಾಗಿದ್ದು, ಗುರು ಬಸವಣ್ಣನವರು ಅನುಭವ ಮಂಟಪ ಮೂಲಕ ವಿಶ್ವಕ್ಕೆ ಪ್ರಚಾಪ್ರಭುತ್ವದ ಕಲ್ಪನೆ ನೀಡಿದ್ದಾರೆ ಎಂದು ಲಂಡನ್ ಜನರಿಗೆ ತಿಳಿಸುವುದು ಸಮಾವೇಶದ ಉದ್ದೇಶ.
| ಶ್ರೀ ಡಾ.ಚನ್ನಬಸವಾನಂದ ಸ್ವಾಮೀಜಿ ಚನ್ನಬಸವೇಶ್ವರ ಜ್ಞಾನಪೀಠ ಬೆಂಗಳೂರು
ಬಸವತತ್ವ ವ್ಯಾಪಕ ಪ್ರಚಾರ-ಪ್ರಸಾರ ಮಾಡಬೇಕಾದ ಅಗತ್ಯವಿದೆ. ಅಲ್ಲಿ ಬೇಡ ಇಲ್ಲಿ ಹೋಗಬಾರದು ಎಂಬುದು ಸಮಂಜಸವಲ್ಲ. ಎಲ್ಲಿ ಹೋದರೂ ಉದ್ದೇಶ ಬಸವತತ್ವ ಪ್ರಚಾರವೇ ಆಗಿರಬೇಕು. ಸಂಕುಚಿತ ಮನೋಭಾವ ಬಿಟ್ಟು ವಿಶಾಲ ಮನೋಭಾವ ಬೆಳೆಸಿಕೊಂಡು ಬಸವತತ್ವ ಪ್ರಸಾರಕ್ಕಾಗಿ ಸಿಗುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಬೇಕು.
| ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಹುಲಸೂರು