ಬರ ನಿರ್ವಹಣೆಗೆ ಕೇಂದ್ರ ಸರ್ಕಾರದಿಂದ ಸಹಕಾರ ಇಲ್ಲ / ಅನುದಾನ ಕೇಳಿ ಪತ್ರ ಬರೆದು ೩ ತಿಂಗಳಾದರೂ ಉತ್ತರ ಇಲ್ಲ / ಮುಖ್ಯಮಂತ್ರಿ ಅಸಮಾಧಾನ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಜಿಲ್ಲೆಯ ಆರು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಲಾಗಿದ್ದು, ಜನ, ಜಾನುವಾರುಗಳಿಗೆ ಯಾವುದೇ ರೀತಿ ತೊಂದರೆಯಾಗದAತೆ ಸರ್ಕಾರದಿಂದ ಎಚ್ಚರವಹಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬರ ನಿರ್ವಹಣೆಗೆ ಕೇಂದ್ರ ಸರ್ಕಾರದಿಂದ ಸಹಕಾರ ದೊರೆಯಲಿಲ್ಲ, ಅನುದಾನ ಕೇಳಿ ಪತ್ರ ಬರೆದು ಮೂರು ತಿಂಗಳು ಕಳೆದರೂ ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬರದ ಕಾಲದಲ್ಲಿ ನರೇಗಾ ಯೋಜನೆಯಡಿ ೧೦೦ ದಿನ ಇದ್ದ ಮಾನವ ದಿನಗಳನ್ನು ೧೫೦ ದಿನಕ್ಕೆ ಹೆಚ್ಚಿಸಲು ಕೇಂದ್ರ ತೀರ್ಮಾನ ಕೈಗೊಳ್ಳುತ್ತಿಲ್ಲ. ರಾಜ್ಯದಲ್ಲಿನ ಸಮಸ್ಯೆಗಳ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರು ಸ್ಪಂದನೆ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ೧೮ ವಾರಗಳಿಗೆ ಆಗುವಷ್ಟು ಮೇವು ಲಭ್ಯವಿದೆ. ಸದ್ಯದ ಪರಿಸ್ಥಿತಿಯಲ್ಲಿ ಕುಡಿಯುವ ನೀರಿಗೆ ಏನು ಸಮಸ್ಯೆಯಿಲ್ಲ. ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿದ್ದು, ತುರ್ತು ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಎಸ್ ಡಿ ಆರ್ ಮತ್ತು ಎನ್ ಡಿಆರ್ ಎಫ್ ನಿಯಮಗಳ ಪ್ರಕಾರ ಹೊಸ ಕೊಳವೆಬಾವಿ ಕೊರೆಸಲು ಅವಕಾಶವಿಲ್ಲ, ಅದರೂ ಸಹ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡಿದ್ದಾರೆ, ಬರ ಪರಿಸ್ಥಿತಿಯನ್ನು ನಾವು ಸಮರ್ಥವಾಗಿ ನಿಭಾಯಿಸುತ್ತಿದ್ದೇವೆ ಎಂದು ತಿಳಿಸಿದರು.

ಸಭೆಯಲ್ಲಿ ಇಲಾಖೆಗಳ ಪ್ರಗತಿ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ಸಾಧನೆಯಲ್ಲಿ ಹಿಂದೆ ಉಳಿದಿರುವ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಸಚಿವರಾದ ಬೈರತಿ ಸುರೇಶ್, ಡಾ.ಎಂ.ಸಿ.ಸುಧಾಕರ್, ಶಾಸಕರಾದ ಕೆ.ವೈ.ನಂಜೇಗೌಡ, ಜಿ.ಕೆ.ವೆಂಕಟಶಿವಾರೆಡ್ಡಿ, ಕೊತ್ತೂರು ಜಿ.ಮಂಜುನಾಥ್, ಎಸ್.ಎನ್.ನಾರಾಯಸ್ವಾಮಿ, ಸಮೃದ್ಧಿ ಮಂಜುನಾಥ್, ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಏಕ್ ರೂಪ್ ಕೌರ್, ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್, ಡಿಸಿ ಅಕ್ರಂ ಪಾಷ, ಸಿಇಒ ಪದ್ಮಬಸವಂತಪ್ಪ, ಎಸ್ಪಿ ಎಂ.ನಾರಾಯಣ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net