

ನಗರದ ನಂಜನಗೂಡು ಹೆದ್ದಾರಿಯ ಬಳಿಯಲ್ಲಿ ಇರುವ ಬಂಡಿಪಾಳ್ಯದ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಪ್ರಾಂಗಣದಲ್ಲಿ ಬಯೋ ಗ್ಯಾಸ್ ಘಟಕವನ್ನು ಸ್ಥಾಪನೆ ಮಾಡಲು ರೂಪರೇಷೆಗಳು ಸಿದ್ಧವಾಗಿವೆ.
ಪ್ರತಿನಿತ್ಯ ಮಾರುಕಟ್ಟೆಯಲ್ಲಿ ಸಂಗ್ರಹವಾಗುವ 25 ಟನ್‌ವರೆಗಿನ ಹಸಿ ತ್ಯಾಜ್ಯದಿಂದ ಬಯೋ ಗ್ಯಾಸ್ ಉತ್ಪಾದಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ಆ ಮೂಲಕ ಎಂಪಿಎಂಸಿಯನ್ನು ಶೂನ್ಯ ತ್ಯಾಜ್ಯ ಮಾರುಕಟ್ಟೆಯನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಅಂದಾಜು 24.96 ಕೋಟ ರೂ. ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಬಯೋ ಗ್ಯಾಸ್ ಘಟಕವನ್ನು ನಿರ್ಮಿಸಲಾಗುತ್ತಿದ್ದು, ರಾಜ್ಯ ಸರ್ಕಾರದ ಸಚಿವ ಸಂಪುಟ ಅನುಮೋದನೆ ಕೂಡ ನೀಡಿದೆ. 50 ಟಿಪಿಡಿ ಸಾಮರ್ಥ್ಯದಲ್ಲಿ ಬಯೋ ಗ್ಯಾಸ್ ಘಟಕ ಸ್ಥಾಪಿಸಲಾಗುತ್ತಿದ್ದು, ಒಂದು ಎಕರೆ ಪ್ರದೇಶವನ್ನು ಪ್ರಾಂಗಣದ ಆವರಣದಲ್ಲಿ ಗುರುತಿಸಲಾಗಿದೆ.
ಮೈಸೂರಿನ ಎಪಿಎಂಸಿಯು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಬಹಳ ದೊಡ್ಡ ಮಟ್ಟದ ಕೇಂದ್ರವಾಗಿದೆ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಟನ್ ದಿನಸಿ ಪದಾರ್ಥಗಳು, ತರಕಾರಿ ಬರುತ್ತದೆ. ಇದರಿಂದಾಗಿ ಇಲ್ಲಿ ಕಸ ಹಾಗೂ ತ್ಯಾಜ್ಯ ಟನ್ ಗಟ್ಟಲೆ ರಾಶಿಯಾಗುತ್ತದೆ. ಇದಲ್ಲದೇ ಕೆಲವೊಂದು ಸಲ ಸರಿಯಾದ ಧಾರಣೆ ಸಿಗದೇ ಇದ್ದ ಸಮಯದಲ್ಲಿ ರೈತರು ಲೋಡುಗಟ್ಟಲೆ ಟೊಮೇಟೋ, ಎಲೆ ಕೋಸು ಸೇರಿದಂತೆ ಇನ್ನಿತರ ತರಕಾರಿಯನ್ನು ಸ್ಥಳದಲ್ಲಿ ಚೆಲ್ಲಿ ಹೋಗುತ್ತಾರೆ. ಇದು ಕೊಳೆತು ದುರ್ವಾಸನೆ ಬೀರುವುದರಿಂದ ಆವರಣದಲ್ಲಿ ವಾತಾವರಣ ಕಲುಷಿತಗೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಮಳೆ ಬಿದ್ದರೆ ಸಾಕು ಕೊಳೆತ ತರಕಾರಿ ಮೋರಿಗಳಲ್ಲಿ ನೀರಿನ ಹರಿವನ್ನು ತಡೆದು ಬಿಡುತ್ತದೆ. ಇದು ತ್ಯಾಜ್ಯವನ್ನು ಸ್ವಚ್ಛ ಮಾಡುವವರಿಗೆ ಕಿರಿಕಿರಿಯನ್ನು ಉಂಟು ಮಾಡುತ್ತದೆ. ಹೀಗಾಗಿ ಪ್ರತಿನಿತ್ಯ ಮಾರುಕಟ್ಟೆಯಲ್ಲಿ ಉತ್ಪಾದನೆಯಾಗುವ ಕೃಷಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಮೂಲಕ ಇಡೀ ಎಪಿಎಂಸಿಯನ್ನು ಕಸ ಮುಕ್ತ ಮಾರುಕಟ್ಟೆಯನ್ನಾಗಿ ಪರಿವರ್ತಿಸಲು ಈ ಯೋಜನೆ ರೂಪಿಸಲಾಗಿದೆ.