ವಿಜಯವಾಣಿ ಸುದ್ದಿಜಾಲ ಹಾವೇರಿ
ಯಾವುದೇ ಮನುಷ್ಯರು ಬದುಕಿದ್ದಾಗ ಅವರ ಉತ್ಸವಗಳನ್ನು ಮಾಡಿಕೊಳ್ಳುವುದಿಲ್ಲ. ಉತ್ಸವ ಅಂದರೆ ನಾವು ದೇವರ ಉತ್ಸವಗಳನ್ನು ಮಾಡುತ್ತೇವೆ. ಮನುಷ್ಯ ಬದುಕಿದ್ದ ಸಮಯದಲ್ಲಿ ದೇವರಾಗೋಕೆ ಆಗೋದಿಲ್ಲ. ಮನುಷ್ಯ ಬದುಕಿದ್ದಾಗ ಅವರ ಉತ್ಸವ ಮಾಡಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ.
ಹೀಗೆಂದು ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ದಾವಣಗೆರೆಯಲ್ಲಿ ಆಯೋಜಿಸಲು ಉದ್ದೇಶಿಸಿರುವ ಸಿದ್ದರಾಮೋತ್ಸವಕ್ಕೆ ಜಿಲ್ಲೆಯ ಹಿರೇಕೆರೂರ ತಾಲೂಕು ಕೋಡದಲ್ಲಿ ಟಾಂಗ್ ನೀಡಿದರು.
ರಾಜ್ಯದಲ್ಲಿ ಅತಿವೃಷ್ಟಿಯಿಂದ ಬಹಳಷ್ಟು ಹಾನಿಯಾಗಿದೆ. ಸರ್ಕಾರವನ್ನು ಟೀಕಿಸುವ ಸಮಾಜವಾದಿ ಸಿದ್ದರಾಮಯ್ಯನವರು ಸಿದ್ದರಾಮೋತ್ಸವ ಮಾಡಿಕೊಳ್ಳುವುದಕ್ಕೆ ಅವರ ಆತ್ಮಕ್ಕೆ ಅವರೇ ಪ್ರಶ್ನೆ ಹಾಕಿಕೊಳ್ಳಲಿ ಎಂದರು.
ಚುನಾವಣೆಗೆ ಇನ್ನು 10 ತಿಂಗಳು ಬಾಕಿಯಿದೆ. ಕೂಸು ಹುಟ್ಟುವ ಮುನ್ನವೇ ಕುಲಾಯಿ ಹೋಲಿಸದರು ಅನ್ನುವಂತೆ ಈಗಲೇ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದವರ ರೀತಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ಮುಖ್ಯಮಂತ್ರಿಯಾಗಲು ಕಿತ್ತಾಡುತ್ತಿರುವುದು ಮೂರ್ಖತನದ ಪರಮಾವಧಿ. ಯಾರು ಸಿಎಂ ಆಗಬೇಕು ಎನ್ನುವುದನ್ನು ಜನರು ತೀರ್ಮಾನ ಮಾಡಬೇಕು. ಮುಂದಿನ ಬಾರಿಯೂ ಬಿಜೆಪಿ 150ಸ್ಥಾನಗಳಲ್ಲಿ ಗೆಲ್ಲುವು ಗುರಿ ಹೊಂದಿದೆ. 150 ಸೀಟು ಪಡೆದು ನಾವೇ ಅಧಿಕಾರಕ್ಕೆ ಬರುತ್ತೇವೆ. ಈಗ ಗುದ್ದಾಡಿ ಅವರು ಸಿದ್ದರಾಮೋತ್ಸವನಾದರೂ ಮಾಡಿಕೊಳ್ಳಲಿ, ಶಿವಕುಮಾರೋತ್ಸವನಾದರೂ ಮಾಡಿಕೊಳ್ಳಲಿ ಇಬ್ಬರ ನಡುವೆ ದೊಡ್ಡ ಕಂದಕ ಆಗುತ್ತಿದೆ. ಕಾಂಗ್ರೆಸ್ ಪಕ್ಷದ ಅವನತಿಗೆ ಇದು ಮುನ್ನುಡಿ ಎಂದರು.
ರೈತರಿಗೆ ಶೀಘ್ರ ಪರಿಹಾರ…
ಮಳೆಯಿಂದ ಬೆಳೆಹಾನಿಯ ಸಮೀಕ್ಷೆ ನಡೆಯುತ್ತಿದೆ. ಮಳೆ ಇದ್ದರಿಂದ ಇನ್ನು ಕೆಲವು ಕಡೆಯಲ್ಲಿ ಸಮೀಕ್ಷೆಗೆ ಅಧಿಕಾರಿಗಳು ಹೋಗಲು ಆಗಿಲ್ಲ. ಹೀಗಾಗಿ ಪೂರ್ಣ ಹಾನಿಯ ವರದಿ ಇನ್ನು ಬಂದಿಲ್ಲ. ಆದಷ್ಟು ಬೇಗ ವರದಿ ತರಿಸಿಕೊಂಡು ರೈತರಿಗೆ ಪರಿಹಾರ ನೀಡುತ್ತೇವೆ ಎಂದರು.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಇದ್ದರು.