

ಬೆಟ್ಟದಪುರ: ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಬೇಕಾದಲ್ಲಿ ವಿದ್ಯಾರ್ಥಿ ಜೀವನದಲ್ಲಿ ಒಳ್ಳೆಯ ಹಾಗೂ ಮಹನೀಯರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಮೈಸೂರಿನ ಮಹಾರಾಣಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪೂನಾಡಹಳ್ಳಿ ರಘು ಸಲಹೆ ನೀಡಿದರು.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪಠ್ಯೇತರ ಚಟುವಟಿಕೆಗಳಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಹೆಚ್ಚು ಅಂಕ ಪಡೆಯುವುದರ ಜತೆಗೆ ಜ್ಞಾನದ ಸಂಪತ್ತನ್ನು ಪ್ರತಿಯೊಬ್ಬರೂ ಸಂಪಾದಿಸಬೇಕು. ಎನ್‌ಎಸ್‌ಎಸ್ ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ.ಎಸ್ ಮಂಜುನಾಥ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡಬೇಕು. ಸಮಯವನ್ನು ಬಳಕೆ ಮಾಡಿಕೊಂಡು ಸಾಧನೆ ಮಾಡಬೇಕು ಎಂದರು.
ರಾಷ್ಟ್ರಮಟ್ಟದಲ್ಲಿ ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಕಾಲೇಜನ್ನು ಪ್ರತಿನಿಧಿಸಿದ ವಿದ್ಯಾರ್ಥಿ ವಿ.ಎಸ್.ಮಾನ್ಯ ಹಾಗೂ ಕಾಲೇಜಿನಿಂದ ಬೇರೆಡೆಗೆ ವರ್ಗಾವಣೆಗೊಂಡ ನೌಕರ ಜಿ.ಎಸ್ ಪ್ರಸನ್ನ ಅವರನ್ನು ಸನ್ಮಾನಿಸಲಾಯಿತು.
ಪ್ರಾಂಶುಪಾಲ ಜ್ಯೋತಿ ಪ್ರಸಾದ್, ಸಿಡಿಸಿ ಸದಸ್ಯರಾದ ಎಸ್.ನಾರಾಯಣಗೌಡ, ರಾಘವೇಂದ್ರ, ಸತೀಶ್‌ಕುಮಾರ್, ಹರೀಶ್, ಗಿರೀಗೌಡ, ಉಪನ್ಯಾಸಕರಾದ ಲೋಕೇಶ್, ದಿವ್ಯಾ, ರಾಜು, ರಾಜೇಶ್, ಅಶ್ವಿನಿ, ಹೇಮಚೈತ್ರಾ, ಸೃಜನ್, ಅಭಿಜಿತ್ ಇದ್ದರು.