ಬದುಕನ್ನು ಪರಿಶುದ್ಧಗೊಳಿಸುವುದೇ ಸತ್ಪುರುಷರ ಗುರಿ

balehonur
ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಜರುಗಿದ ಹುಣ್ಣಿಮೆ ಧರ್ಮ ಸಮಾರಂಭದಲ್ಲಿ ಶ್ರೀ ಉಜ್ಜಯಿನಿ ಜಗದ್ಗುರು ಮರುಳಸಿದ್ಧೇಶ್ವರ ಲೀಲಾಮೃತ ಕೃತಿಯನ್ನು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಬಿಡುಗಡೆಗೊಳಿಸಿದರು. ಶಾಂತವೀರ ಶಿವಾಚಾರ್ಯ ಸ್ವಾಮೀಜಿ ಇತರರಿದ್ದರು.
Published on

ಬಾಳೆಹೊನ್ನೂರು: ಬಾಳಿನ ನಿಜವಾದ ಸಂಪತ್ತು ಸಂಸ್ಕಾರ. ಸಂಸ್ಕಾರ ಸಂಸ್ಕೃತಿಯಿಲ್ಲದ ಮಾನವ ಜೀವನ ವ್ಯರ್ಥ. ಮಾನವೀಯತೆಯಿಂದ ದೈವತ್ವಕ್ಕೆ ಕರೆದೊಯ್ಯುವ ಮಾರ್ಗವೇ ಸಂಸ್ಕೃತಿ. ಮನುಷ್ಯನ ಬದುಕನ್ನು ಪರಿಶುದ್ಧಗೊಳಿಸುವುದೇ ಸತ್ಪುರುಷರ ಗುರಿಯಾಗಿದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಗುರುವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಜರುಗಿದ ಶ್ರಾವಣ ಪೂಜಾ ತಪೋನುಷ್ಠಾನ ಹಾಗೂ ಹುಣ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಅವರು ಗುರುವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಜರುಗಿದ ಶ್ರಾವಣ ಪೂಜಾ ತಪೋನುಷ್ಠಾನ ಹಾಗೂ ಹುಣ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಜೀವನ ಸುಖ ದುಃಖಗಳ ಸಂಕಲನ. ಸುಖ ದುಃಖಗಳನ್ನು ಸಮಾನವಾಗಿ ಕಂಡು ನಡೆಯುವ ವ್ಯಕ್ತಿ ಜೀವನದಲ್ಲಿ ಶ್ರೇಯಸ್ಸನ್ನು ಕಾಣಬಲ್ಲ. ಆದರ್ಶ ವಿಚಾರಗಳನ್ನು ಅಳವಡಿಸಿಕೊಂಡು ಬಾಳಲು ಸತ್ಪುರುಷರ ಮಾರ್ಗದರ್ಶನ ಅವಶ್ಯಕ. ಮನುಷ್ಯ ಲೌಕಿಕ ಮತ್ತು ಪಾರಮಾರ್ಥಿಕಗಳೆರಡನ್ನು ಅನುಸರಿಸಿ ಬಾಳಬೇಕಾಗುತ್ತದೆ. ಇವುಗಳನ್ನು ಅರಿತು ಬಾಳಲೆಂದೇ ಧರ್ಮ, ದೇವರು ಮತ್ತು ಗುರು ಮಾರ್ಗದರ್ಶನ ಮನುಷ್ಯನ ಜೀವನದಲ್ಲಿ ಹೊಸ ಬೆಳಕು ಮೂಡಿಸುತ್ತದೆ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರ ರೇಣುಕ ಗೀತೆಯಲ್ಲಿ
ಬೋಧಿಸಿದ್ದಾರೆ ಎಂದರು. ಮನುಷ್ಯ ಆಸ್ತಿ, ಅಧಿಕಾರ ಕಳೆದುಕೊಂಡಾಗ ಬಡವನಾಗುವುದಿಲ್ಲ. ಆದರೆ ಆತ್ಮೀಯರನ್ನು ಕಳೆದುಕೊಂಡಾಗ ಬಡವನಾಗುತ್ತಾನೆ. ನಿಂತ ನೀರಿನಲ್ಲಿ ಕ್ರಿಮಿಗಳು ಹುಟ್ಟುವಂತೆ ಕೆಲಸವಿಲ್ಲದ ಮನುಷ್ಯನಲ್ಲಿ ಕೆಟ್ಟ ವಿಚಾರಗಳು ಹುಟ್ಟುತ್ತವೆ. ಸತ್ಯ ಶುದ್ಧ ಧರ್ಮ ದಾರಿಯಲ್ಲಿ ನಡೆದರೆ ಬಾಳು ಉಜ್ವಲಗೊಳ್ಳುವುದೆಂದರು.
ಇದೇ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕಿನ ಆಲೂರು ಹಿರೇಮಠದಿಂದ ಮುದ್ರಣಗೊಂಡ ಶ್ರೀ ಉಜ್ಜಯಿನಿ ಜಗದ್ಗುರು ಮರುಳಸಿದ್ಧೇಶ್ವರ ಲೀಲಾಮೃತ ಕೃತಿಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆಗೊಳಿಸಿದರು.
ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಮಾಡಿದ ಮಾದನ ಹಿಪ್ಪರಗಿ ಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಮನುಷ್ಯನಿಗೆ ಎಷ್ಟು ಗಳಿಸಿದರೂ ತೃಪ್ತಿಯಿರುವುದಿಲ್ಲ. ಸಂಪತ್ತಿನಿಂದ ಶಾಂತಿ ಸಿಗುವುದಿಲ್ಲ. ಅಧಿಕಾರ ಅಂತಸ್ತಿನಿಂದ ಸಂತೃಪ್ತಿ ಸಿಗುವುದಿಲ್ಲ. ಆಚಾರ್ಯರ ಋಷಿಮುನಿಗಳ ಮೌಲ್ಯ ತುಂಬಿದ ಮಾತುಗಳು ಬದುಕಿಗೆ ಉನ್ನತಿ ತಂದು ಕೊಡಬಲ್ಲವು. ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಶ್ವ ಬಂಧುತ್ವ ಶಾಂತಿ ಸಂದೇಶ ಸಾಮರಸ್ಯ ಬದುಕಿಗೆ ಬಹು ದೊಡ್ಡ ಶಕ್ತಿ ಎಂದರು.
ಸಮಾರಂಭದಲ್ಲಿ ದೇವರಭೂಪುರದ ಅಭಿನವ ಗಜದಂಡ ಶಿವಾಚಾರ್ಯರು, ಬೀರೂರಿನ ರುದ್ರಮುನಿ ಶಿವಾಚಾರ್ಯರು, ಮಾದಿಹಳ್ಳಿ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ನುಡಿನಮನ ಸಲ್ಲಿಸಿದರು. ದೇವರ ಹಿಪ್ಪರಗಿ ಸದಯ್ಯನಮಠದ ಶ್ರೀಗಳು, ಕೂಡ್ಲಿಗಿ ತಾಲೂಕು ಆಲೂರು ನಿರಂಜನ ದೇವರು, ಸಿದ್ಧಲಿಂಗಯ್ಯಸ್ವಾಮಿ, ಎಸ್.ಎಂ.ವೀರಭದ್ರಪ್ಪ, ಲಿಂಗಸುಗೂರಿನ ಶಿವಕುಮಾರ ನಂದಿಕೋಲಮಠ, ಆಸಂದಿ ರುದ್ರಯ್ಯ, ಬಾಬುಗೌಡ ವದ್ದಲ ಇತರೆ ಗಣ್ಯರು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಗಂಗಾಧರ ಹಿರೇಮಠ ಇವರಿಂದ ಭಕ್ತಿ ಗೀತೆ ಜರುಗಿತು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು. ಪ್ರಾತಏಕಾಲ ಶ್ರೀ ಪೀಠದ ಎಲ್ಲ ದೈವಗಳಿಗೆ ವಿಶೇಷ ಪೂಜೆಗಳು ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net