

ಹುಣಸೂರು: ನಗರ ವ್ಯಾಪ್ತಿಯ ಬಡಾವಣೆಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳುವ ಕಾರ್ಯ ವನ್ನು ನಗರಸಭೆ ಗಂಭೀರವಾಗಿ ಪರಿಗಣಿಸಬೇಕೆಂದು ಶಾಸಕ ಎಚ್.ಪಿ.ಮಂಜುನಾಥ್ ಅಧಿಕಾರಿಗಳಿಗೆ ಸೂಚಿಸಿದರು. ಭಾನುವಾರ ನಗರಸಭೆ ವ್ಯಾಪ್ತಿಯ ವಾರ್ಡ್‌ಗಳಿಗೆ ಭೇಟಿ ನೀಡುವ ಕಾರ್ಯಕ್ರಮದ ವೇಳೆ 13ನೇ ವಾರ್ಡ್‌ನ ಕುರಿಮಾಂಸ ಮಾರುಕಟ್ಟೆಯ ಅನೈರ್ಮಲ್ಯವನ್ನು ಕಂಡು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಕುರಿಮಾಂಸ ಮಾರುಕಟ್ಟೆಯಿಂದ ತ್ಯಾಜ್ಯವಸ್ತು ಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ಕಾರಣ ಇಡೀ ಬಡಾವಣೆ ದುರ್ನಾತದಿಂದ ಕೂಡಿರುತ್ತದೆ ಎಂದು ಈ ಭಾಗದ ನಿವಾಸಿಗಳಿಂದ ಹಲವಾರು ಬಾರಿ ದೂರು ಬಂದಿದೆ. ಹೀಗಾಗಿ ತ್ಯಾಜ್ಯನಿರ್ವಹಣೆಯನ್ನು ಮಳಿಗೆ ಮಾಲೀಕರ ಸಹಕಾರದೊಂದಿಗೆ ಸಮರ್ಪಕವಾಗಿ ಮಾಡಿ. ಅಸಹಕಾರ ನೀಡುವ ಅಂಗಡಿ ಮಾಲೀಕರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಿ. ನಾಗರಿಕರ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರಬಾರದು ಎಂದು ಸೂಚಿಸಿದರು.
ಭೇಟಿ ವೇಳೆ ನಗರಸಭಾ ಸದಸ್ಯ ಮಾಲಿಕ್ ಪಾಷ, ಪೌರಾಯುಕ್ತೆ ಎಂ.ಮಾನಸ, ರೆವಿನ್ಯೂ ಅಧಿಕಾರಿ ಸಿದ್ದರಾಜು, ಮೇಲ್ವಿಚಾರಕ ಕೃಷ್ಣೇಗೌಡ, ಮುಖಂಡ ರಾಘು ಇತರರಿದ್ದರು.