ಬಡವರಿಗೆ ಆರ್ಥಿಕ ಸಬಲತೆ ಕೊಟ್ಟ ಗ್ಯಾರಂಟಿ ಯೋಜನೆ

HUN-APR-13-2(GURANTEE YOJANE MEETING)
ಹುಣಸೂರು ನಗರದ ಗ್ಯಾರಂಟಿ ಯೋಜನೆ ಕಚೇರಿಗೆ ಆಗಮಿಸಿದ ಗ್ಯಾರಂಟಿ ಯೋಜನೆ ರಾಜ್ಯ ಉಪಾಧ್ಯಕ್ಷ ಸೂರಜ್ ಹೆಗ್ಗಡೆರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ರಘು ಕಲ್ಕುಣಿಕೆ, ಅಮರನಾಥ್, ದರ್ಶನ್ ಇತರರಿದ್ದರು.
Published on

ಹುಣಸೂರು : ಗ್ಯಾರಂಟಿ ಯೋಜನೆಗಳು ಸರ್ಕಾರದ ಮತ್ತು ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕ ಸಬಲತೆ ತಂದುಕೊಟ್ಟಿದೆ ಎಂದು ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಸೂರಜ್ ಹೆಗ್ಗಡೆ ಅಭಿಪ್ರಾಯಪಟ್ಟರು.

ಶನಿವಾರ ನಗರದ ಗ್ಯಾರಂಟಿ ಯೋಜನೆಗಳ ಕಚೇರಿಗೆ ಭೇಟಿ ನೀಡಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಲಕ್ಷಾಂತರ ಕುಟುಂಬಗಳು ಬದುಕು ಕಂಡುಕೊಂಡಿವೆ. ಶಕ್ತಿ ಯೋಜನೆಯಿಂದ ರಾಜ್ಯದ ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರು ತೆರಳಿ ಧನ್ಯತೆ ಅನುಭವಿಸುತ್ತಿದ್ದಾರೆ. ಸಾರಿಗೆ ಸಂಸ್ಥೆಗೂ ಲಾಭ ತಂದುಕೊಟ್ಟಿದೆ. ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿಗೆ ತೊಡಕಾಗಿಲ್ಲ. ಬಜೆಟ್‌ನಲ್ಲಿ ಜಿಲ್ಲಾವಾರು ಅನುದಾನ ಬಿಡುಗಡೆ ಮಾಡಲಾಗಿದೆ. 20 ತಿಂಗಳ ಪೈಕಿ 18 ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡಲಾಗಿದೆ.

ದೇಶದ ನವದೆಹಲಿ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಬಿಜೆಪಿ ನಮ್ಮ ಗ್ಯಾರಂಟಿ ಯೋಜನೆಗಳನ್ನೇ ಜಾರಿಗೆ ತಂದಿವೆ. ಇತರರಿಗೆ ನಮ್ಮ ರಾಜ್ಯ ಮಾದರಿಯಾಗಿದೆ. ಎಲ್ಲ ಯೋಜನೆಗಳ ಫಲಾನುಭವಿಗಳಿಗೆ ನೇರವಾಗಿ ಸೌಲಭ್ಯ ತಲುಪುತ್ತಿರುವುದರಿಂದ ಇಲ್ಲಿನ ಪ್ರತಿಪಕ್ಷಗಳು ಸಹಿಸಿಕೊಳ್ಳದೆ ಟೀಕಿಸುತ್ತಿವೆ. ಕೇಂದ್ರ ಸರ್ಕಾರ 16,500 ಕೋಟಿ ರೂ. ಜಿಎಸ್‌ಟಿ ಹಣ ನೀಡಿಲ್ಲವೆಂದು ಆರೋಪಿಸಿದರು. ವಿಪಕ್ಷಗಳು ಗ್ಯಾರಂಟಿ ಯೋಜನೆಯ ಯಶಸ್ಸನ್ನು ಕಂಡು ಅಸೂಯೆಗೊಂಡು ಟೀಕಿಸುತ್ತಿವೆ ಎಂದು ಬೇಸರಿಸಿದರು.

ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ರಘು ಕಲ್ಕುಣಿಕೆ ಮಾತನಾಡಿ, ತಾಲೂಕಿನಲ್ಲಿ 79 ಸಾವಿರ ಕುಟುಂಬಗಳಿಗೆ ಗೃಹಲಕ್ಷ್ಮಿ ಯೋಜನೆಯಡಿ ತಿಂಗಳಿಗೆ 15.80 ಕೋಟಿ ಹಣ ಬರುತ್ತಿದೆ. ಅನ್ನಭಾಗ್ಯ ಯೋಜನೆಯಡಿ ಪಡಿತರ ಕೇಂದ್ರಕ್ಕೆ ಬರಲು ಸಾಧ್ಯವಾಗದವರಿಗೆ ಮನೆಬಾಗಿಲಿಗೆ ಪಡಿತರ ತಲುಪಿಸಲಾಗುತ್ತಿದೆ. 669 ಮಂದಿ ಯುವನಿಧಿ ಯೋಜನೆ ಪಲಾನುಭವಿಗಳಿದ್ದು, ಯೋಜನೆ ಸದ್ಬಳಕೆಯಾಗುತ್ತಿದೆ ಎಂದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ.ಅಮರನಾಥ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಕುಮಾರ್, ಗ್ಯಾರಂಟಿ ಯೋಜನಾ ಸಮಿತಿ ಸದಸ್ಯರು ಯುವಕಾಂಗ್ರೆಸ್ ಅಧ್ಯಕ್ಷ ದರ್ಶನ್, ಫೈಸಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net