ಸರಗೂರು : ಎನ್‌ಎಂಎಂಎಸ್ (ರಾಷ್ಟ್ರೀಯ ಸಾಧನೆ ಆಧಾರಿತ ವಿದ್ಯಾರ್ಥಿ ವೇತನ) ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಬಾರದೆ ಇರುವುದರಿಂದ ಬಡ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಸರ್ಕಾರಿ ಅನುದಾನಿತ ಶಾಲೆಗಳ ಎಂಟನೇ ತರಗತಿಯಲ್ಲಿ ಎನ್‌ಎಂಎಂಎಸ್ ವಿದ್ಯಾರ್ಥಿ ವೇತನ ಪರೀಕ್ಷೆ ನಡೆಸಲಾಗುತ್ತಿದ್ದು, ಇದರಲ್ಲಿ ಉತೀರ್ಣರಾದ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ವರೆಗೆ ಪ್ರತಿ ವರ್ಷ 12000 ರೂ .ಗಳಂತೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಆದರೆ ಎರಡು ವರ್ಷಗಳಿಂದ ಎಸ್ಸಿ-ಎಸ್ಟಿ ಮಕ್ಕಳಿಗೆ ಸ್ಕಾಲರ್‌ಶಿಪ್ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ವಿಜಯವಾಣಿಯೊಂದಿಗೆ ಆರೋಪಿಸಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮಕ್ಕಳ ರಿನೀವಲ್ ಅರ್ಜಿಗಳನ್ನು ಸಲ್ಲಿಸಿದ್ದರೂ ತಿರಸ್ಕರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಮಟ್ಟದಲ್ಲಿ ಅಧಿಕಾರಿಗಳು ಮಕ್ಕಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ನೊಂದ ವಿದ್ಯಾರ್ಥಿಗಳು ದೂರಿದರು.
ಸಾಮಾನ್ಯ ವರ್ಗ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ. ಎಸ್ಸಿ-ಎಸ್ಟಿ ವರ್ಗದ ವಿದ್ಯಾರ್ಥಿಗಳಿಗೆ ವೇತನ ನೀಡದೆ ಸರ್ಕಾರ ಅನ್ಯಾಯ ಮಾಡುತ್ತಿದೆ. ರಾಜ್ಯಾದ್ಯಂತ ನೂರಾರು ವಿದ್ಯಾರ್ಥಿಗಳು(ಮೈಸೂರು ಜಿಲ್ಲೆಯಲ್ಲಿ 101)ಈ ರೀತಿಯಾಗಿ ವಿದ್ಯಾರ್ಥಿವೇತನದಿಂದ ವಂಚಿತರಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮಕ್ಕಳ ಪಾಲಕರು ಆಗ್ರಹಿಸಿದ್ದಾರೆ.
ವಿಜಯವಾಣಿಯೊಂದಿಗೆ ಪಾಲಕರಾದ ಚಂದ್ರಶೇಖರ, ರಾಮಚಂದ್ರ, ಸುನೀತಮ್ಮ ಮೊದಲಾದವರು 2023-24ನೇ ಸಾಲಿನಲ್ಲಿ ನಮ್ಮ ಮಕ್ಕಳು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದುವರೆಗೂ ವಿದ್ಯಾರ್ಥಿವೇತನ ಬಂದಿಲ್ಲ. ಈ ಬಾರಿಯು ವಿದ್ಯಾರ್ಥಿ ವೇತನ ಬರದಿದ್ದರೆ ಒಟ್ಟು 4 ವರ್ಷಗಳ ವಿದ್ಯಾರ್ಥಿಗಳ ವೇತನ ಬರದಂತಾಗುತ್ತದೆ. ಮಕ್ಕಳು ಉತೀರ್ಣರಾಗಲು ಶ್ರಮಿಸಿದ ಶಿಕ್ಷಕರ ಶ್ರಮವೂ ವ್ಯರ್ಥವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.