ಬಡ ದಂಪತಿಗೆ ವೃದ್ಧಾಪ್ಯ ವೇತನ ಕಲ್ಪಿಸಲು ಒತ್ತಾಯ

HUN-AUG-13-2(DEMAND FOR OLD AGE PENSION )
Published on


ಹುಣಸೂರು: ನಗರದ ಚಿಕ್ಕಹುಣಸೂರು ಬಾಚಳ್ಳಿ ರಸ್ತೆಯ ಅಂಬೇಡ್ಕರ್ ನಗರದಲ್ಲಿ ಗುಡಿಸಲಲ್ಲಿ ವಾಸಿಯಾಗಿರುವ ಕುಂಬಾರ ಸಮುದಾಯಕ್ಕೆ ಸೇರಿದ ಪುಟ್ಟಸ್ವಾಮಿ (ದಾಸಪ್ಪ)ಅವರಿಗೆ ವೃದ್ಧಾಪ್ಯ ವೇತನ ನೀಡಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಉಪತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು, ದಾಸಪ್ಪ-ಶೋಭ ದಂಪತಿ ನಿರ್ಗತಿಕರಾಗಿದ್ದು, ನಿತ್ಯದ ಜೀವನಕ್ಕಾಗಿ ಶಂಖ ಜಾಗಟೆಯೊಂದಿಗೆ ಹುಣಸೂರು ನಗರದ ಬೀದಿ ಬೀದಿಗಳಲ್ಲಿ ಭಿಕ್ಷಾಟನೆ ಮಾಡುತ್ತಾರೆ. ರಸ್ತೆಬದಿ, ಪಾಳು ಮಂಟಪಗಳಲ್ಲಿ ಮಲಗುತ್ತಾರೆ. ಎರಡು ದಿನಗಳ ಹಿಂದೆ ಭಿಕ್ಷಾಟನೆ ಮಾಡಿದ್ದ ಚಿಲ್ಲರೆ ಕಾಸು ಲೆಕ್ಕ ಹಾಕುವ ವೇಳೆ ಯಾರೋ ದುಷ್ಟರು ಇವರ ಜತೆ ಜಗಳ ಮಾಡಿ ಕಾಸು ಕಸಿದುಕೊಂಡು ಹೋಗಿದ್ದಾರೆ.

ಇಂತಹ ಗೋಳಿನ ನಡುವೆ ಬದುಕುತ್ತಿರುವ ದಂಪತಿಗೆ ತಾಲೂಕು ಆಡಳಿತ ವೃದ್ಧಾಪ್ಯ ವೇತನ ಮಂಜೂರು ಮಾಡುವ ಮೂಲಕ ಬೆಂಬಲಕ್ಕೆ ನಿಲ್ಲಬೇಕು. ವೇತನ ಮಂಜೂರಾತಿಗೆ ಅವಶ್ಯವಾದ ಮೂಲ ದಾಖಲೆಗಳಾದ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಐಡಿ ಕಾರ್ಡ್, ಬ್ಯಾಂಕ್ ಪಾಸ್‌ಪುಸ್ತಕ ದಾಖಲೆಗಳನ್ನು ಮಾಡಿಸಕೊಡಲಾಗಿದ್ದು, ಚಿಕ್ಕ ಗುಡಿಸಲನ್ನೂ ಸಮಿತಿ ವತಿಯಿಂದ ನಿರ್ಮಿಸಿಕೊಡಲಾಗಿದೆ ಎಂದರು. ಉಪ ತಹಸೀಲ್ದಾರ್ ನರಸಿಂಹಯ್ಯ ಮನವಿ ಸ್ವೀಕರಿಸಿ ಪರಿಶೀಲನೆ ಮಾಡುವುದಾಗಿ ಭರವಸೆ ನೀಡಿದರು.


.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net