ಫ್ಲೆಕ್ಸ್ ಅಳವಡಿಕೆಗೆ ನೀಡಿದ್ದ ಅನುಮತಿ ಹಿಂಪಡೆದ ಹೈಕೋರ್ಟ್

Published on

ಬೆಂಗಳೂರು: ಕರೊನಾ ಸೋಂಕು ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ನಿಗದಿತ ಪ್ರದೇಶದಲ್ಲಿ ಜಾಹೀರಾತು ಫಲಕ (ಹೋರ್ಡಿಂಗ್ಸ್) ಅಳವಡಿಸಲು ಅನುಮತಿ ನೀಡಿ ಜು.15ರಂದು ಹೊರಡಿಸಿದ್ದ ಆದೇಶ ಹಿಂಪಡೆದಿರುವ ಹೈಕೋರ್ಟ್, ಈಗಾಗಲೇ ಅಳವಡಿಸಿರುವ ಫಲಕಗಳನ್ನು 1 ವಾರದೊಳಗೆ ತೆರವುಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.

ಕೋವಿಡ್ ಜಾಗೃತಿ ಜಾಹೀರಾತು ಫಲಕ ಅಳವಡಿಸಲು ಅನುಮತಿ ನೀಡುವ ವೇಳೆ ಹೈಕೋರ್ಟ್ ವಿಧಿಸಿದ್ದ ಷರತ್ತುಗಳನ್ನು ಉಲ್ಲಂಸಲಾಗಿದೆ ಎಂದು ಆರೋಪಿಸಿ ವಕೀಲ ಜಿ.ಆರ್. ಮೋಹನ್ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ಸಿಜೆ ಎ.ಎಸ್.ಓಕ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿತು.

ಇದೇ ವೇಳೆ, ಕರೊನಾ ಜಾಗೃತಿ ಜಾಹೀರಾತು ಅಳವಡಿಸಲು ಖಾಸಗಿ ಜಾಹೀರಾತು ಏಜೆನ್ಸಿಗೆ ಅನುಮತಿ ನೀಡಿದ ಅಧಿಕಾರಿ ವಿರುದ್ಧ ಹಿರಿಯ ಅಧಿಕಾರಿಯೊಬ್ಬರಿಂದ ವಿಚಾರಣೆ ನಡೆಸಿ ಅ.13ಕ್ಕೆ ವರದಿ ಸಲ್ಲಿಸಬೇಕು. ಜತೆಗೆ, ರಾಜ್ಯದಾದ್ಯಂತ ಅನಧಿಕೃತ ಜಾಹಿರಾತು ಫಲಕ ತೆರವಿಗೆ ಸಂಬಂಧಿಸಿದಂತೆ 2019ರ ನವಂಬರ್‌ ತಿಂಗಳಿಂದ ನೀಡಲಾಗಿರುವ ನಿರ್ದೇಶನಗಳ ಅನುಪಾಲನಾ ವರದಿಯನ್ನು 1 ತಿಂಗಳಲ್ಲಿ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದ ಪೀಠ, ನ.3ಕ್ಕೆ ವಿಚಾರಣೆ ಮುಂದೂಡಿತು.

ಇದಕ್ಕೂ ಮುನ್ನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಡಾ.ಓಂ ಪ್ರಕಾಶ್ ಪಾಟೀಲ್ ಅವರ ಪ್ರಮಾಣಪತ್ರವನ್ನು ಸರ್ಕಾರದ ಪರ ವಲೀಲರು ನ್ಯಾಯಪೀಠಕ್ಕೆ ಸಲ್ಲಿಸಿದರು. ಕೋವಿಡ್ ಜಾಗೃತಿಗಾಗಿ ಸರ್ಕಾರ ಹಲವು ಕ್ರಮ ಕೈಗೊಂಡಿದ್ದು, ಖಾಸಗಿ ಜಾಹೀರಾತು ಏಜೆನ್ಸಿಯೊಂದು ಸರ್ಕಾರದೊಂದಿಗೆ ಕೈಜೋಡಿಸುವುದಾಗಿ ಪ್ರಸ್ತಾವನೆ ಸಲ್ಲಿಸಿತ್ತು. ಆದ್ದರಿಂದ, ಆರೋಗ್ಯ ಇಲಾಖೆ ಕೆಲ ಷರತ್ತುಗಳನ್ನು ವಿಧಿಸಿ ಜಾಹೀರಾತು ಲಕ ಅಳವಡಿಸಲು ಆ ಸಂಸ್ಥೆಗೆ ಅನುಮತಿ ನೀಡಿತ್ತು. ಆದರೆ, ಸಂಸ್ಥೆಯು ಷರತ್ತುಗಳನ್ನು ಉಲ್ಲಂಸಿದ ಹಿನ್ನೆಲೆಯಲ್ಲಿ ಅದಕ್ಕೆ ನೋಟಿಸ್ ನೀಡಿ ಲಕ ಅಳವಡಿಕೆ ಮುಂದುವರಿಸದಂತೆ ಹಾಗೂ ಈವರೆಗೂ ಅಳವಡಿಸಿರುವ ಲಕಗಳನ್ನು ತೆರವು ಮಾಡುವಂತೆ ನಿರ್ದೇಶಿಸಲಾಗಿದೆ ಎಂದರು.

ಸರ್ಕಾರದ ನಡೆಗೆ ಕೋರ್ಟ್ ಅಸಮಾಧಾನ:
ಅದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಜಾಹೀರಾತು ಫಲಕ ಅಳವಡಿಸಲು ಅನುಮತಿ ನೀಡುವ ಸಂದರ್ಭದಲ್ಲಿ ಯಾವುದೇ ಖಾಸಗಿ ಸಂಸ್ಥೆ ಅಥವಾ ಖಾಸಗಿ ಉತ್ಪನ್ನ ಸೇವೆಗಳ ಕುರಿತು ಜಾಹೀರಾತು ಪ್ರದರ್ಶಿಸಬಾರದು ಎಂದು ಹೈಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. ಅನುಮತಿ ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯಲ್ಲಿ ಖಾಸಗಿ ಜಾಹೀರಾತುಗಳನ್ನು ನೀಡುವುದಿಲ್ಲ ಎಂದು ಸರ್ಕಾರವೇ ಭರವಸೆ ನೀಡಿದೆ. ಹೀಗಿದ್ದರೂ, ಈ ರೀತಿ ನಡೆದುಕೊಂಡಿರುವುದು ಸರಿಯಲ್ಲ. ಕರೊನಾ ಸಂದರ್ಭದಲ್ಲಿ ನ್ಯಾಯಾಲಯದ ಆದೇಶ ಮುಂದಿಟ್ಟುಕೊಂಡು ಖಾಸಗಿ ಸಂಸ್ಥೆಗಳಿಗೆ ಲಾಭ ಮಾಡಿಕೊಳ್ಳಲು ಸರ್ಕಾರವೇ ದಾರಿ ಮಾಡಿಕೊಟ್ಟಂತಿದೆ. ಕೋರ್ಟ್ ಆದೇಶಗಳನ್ನು ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net