ಫೆಂಗಲ್ ಚಂಡಮಾರುತ ಪ್ರಭಾವ / ತರಕಾರಿ ಬೆಲೆಗಳು ಕುಸಿತ / ಸುದಾರಿಸಿದ ಟಮೆಟೋ ಬೆಲೆ / ಮಳೆಯಿಂದ ಗುಣಮಟ್ಟ ಕಳೆದುಕೊಂಡ ತರಕಾರಿಗಳು

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಬಂಗಾಳಕೊಲ್ಲಿಯ ವಾಯುಭಾರ ಕುಸಿತದಿಂದ ಫೆಂಗಲ್ ಚಂಡಮಾರುತ ಚನೈನಲ್ಲಿ ಅಪ್ಪಳಿಸಿದ ಪರಿಣಾಮ ಕರ್ನಾಟಕದ ಕೆಲವು ಭಾಗಗಳಲ್ಲಿ ಹಾನಿ ಉಂಟಾಗಿದ್ದು, ಕೋಲಾರ ಜಿಲ್ಲೆಯಲ್ಲಿಯೂ ಸೈಕ್ಲೋನ್ ಎಫೆಕ್ಟ್ನಿಂದ ತರಕಾರಿ ಬೆಲೆಗಳು ಕುಸಿತ ಕಂಡಿದ್ದು, ಟೊಮೆಟೋ ಮಾತ್ರ ಚೇತರಿಸಿಕೊಂಡಿದೆ. ೧೫ ಕೆ.ಜಿ.ಬಾಕ್ಸ್ ೬೫೦ ರಿಂದ ೭೦೦ ರೂ.ಗಳಿಗೆ ಮಾರಾಟವಾಗುತ್ತಿದೆ. ಉಳಿದ ತರಕಾರಿ ಬೆಲೆಗಳು ಕುಸಿದಿವೆ.

ಕಳೆದ ಒಂದು ವಾರದಿಂದ ಫೆಂಗಲ್ ಚಂಡಮಾರುತ ಪ್ರಭಾವ ಕೋಲಾರ ಜಿಲ್ಲೆಗೆ ತಟ್ಟಿದ್ದು, ಜಿಲ್ಲೆಯ ರೈತರ ಜೀವನಾಡಿ ಬೆಳೆಗಳಾದ ಟೊಮೆಟೋ, ಆಲೂಗಡ್ಡೆ, ಕ್ಯಾಪ್ಸಿಕಂ, ಬಜ್ಜಿ ಮುಂತಾದ ತರಕಾರಿ ಬೆಳೆಗಳು ದಿಢೀರನೆ ಬೆಲೆ ಕುಸಿದಿದೆ. ಮಳೆಗೂ ಮುನ್ನ ಕುಸಿದಿದ್ದ ಟೊಮೆಟೋ ಬೆಲೆ ಚೇತರಿಸಿಕೊಂಡಿದೆ. ೩ ಮತ್ತು ೪ ದಿನಗಳ ಕಾಲ ಸತತವಾಗಿ ಸುರಿದ ಜಡಿ ಮಳೆಯಿಂದ ತರಕಾರಿಗಳು ಗುಣಮಟ್ಟ ಕಳೆದುಕೊಂಡಿರುವುದರಿAದ ಬೆಲೆಯು ಕುಸಿಯಲು ಕಾರಣವಾಗಿದೆ.

ಮಳೆಯಿಂದಾಗಿ ಭೂಮಿಯಲ್ಲಿ ತೇವಾಂಶ ಹೆಚ್ಚಾದ ಕಾರಣ ತರಕಾರಿಗಳು ಗಿಡಗಳಲ್ಲಿಯೇ ಕೊಳೆಯುವಂತಾಗಿದೆ. ಜೊತೆಗೆ ಮಚ್ಚೆ ರೋಗವೂ ಕಾಣಿಸಿಕೊಂಡಿರುವುದರಿAದ ಗುಣಮಟ್ಟ ಕಳೆದುಕೊಂಡಿವೆ. ೩ ಮತ್ತು ೪ ದಿನಗಳ ಕಾಲ ಜಡಿಮಳೆ ಮುಂದುವರೆದ ಕಾರಣ ತರಕಾರಿಗಳನ್ನು ಕಟಾವು ಮಾಡದೆ ತೋಟಗಳಲ್ಲಿಯೇ ಬಿಟ್ಟಿದ್ದರು.

ಮಳೆ ಕಳೆದ ೨ ದಿನಗಳಿಂದ ಸ್ವಲ್ಪ ಮಟ್ಟಿಗೆ ಹಿನ್ನಡೆಯಾದ ಕಾರಣ ರೈತರು ಏಕಾಏಕಿ ತೋಟಗಳಲ್ಲಿ ತರಕಾರಿಗಳನ್ನು ಕಿತ್ತು ಮಾರುಕಟ್ಟೆಗೆ ತಂದಿದ್ದಾರೆ. ಮಾರುಕಟ್ಟೆಯಲ್ಲಿ ಅವಕ ಹೆಚ್ಚಾದ ಕಾರಣ ಹೊರ ರಾಜ್ಯಗಳಲ್ಲಿ ಮಳೆ ಇರುವುದರಿಂದ ರಫ್ತು ಆಗದೆ ಬೆಲೆ ಕುಸಿಯಲು ಕಾರಣವಾಗಿದೆ.

ಟೊಮೆಟೋ ಕಳೆದ ಒಂದು ತಿಂಗಳಿನಿAದ ಬೆಲೆ ಇಲ್ಲದೆ ಇತ್ತು. ೧೫ ಕೆ.ಜಿ.ಬಾಕ್ಸ್ ೨೫೦ ರಿಂದ ೩೦೦ ರೂ.ಗಳಿಗೆ ಮಾರಾಟವಾಗುತ್ತಿತ್ತು. ಫೆಂಗಲ್ ಚಂಡಮಾರುತದ ಪ್ರಭಾವ ಹೆಚ್ಚಾಗಿ ದಿಢೀರನೆ ಟೊಮೆಟೋಗೆ ಉತ್ತಮ ಬೆಲೆ ಬರುವಂತಾಗಿದೆ.

ಗುರುವಾರ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಬೀನ್ಸ್ ೩೦ ರಿಂದ ೩೫ ರೂ.ಗಳ ವರೆಗೆ ಮಾರಾಟವಾಗಿದೆ. ಮೆಣಸಿನಕಾಯಿ ೧೨ ರಿಂದ ೧೫ ರೂ.ಗಳ ವರೆವಿಗೆ ಮಾರಾಟವಾಗಿದೆ. ಕ್ಯಾಪ್ಸಿಕಂ ಮತ್ತು ಬಜ್ಜಿ ೧೫ ರೂ.ಗಳಿಂದ ೨೦ ರೂ.ಗಳಿಗೆ, ಬದನೆಕಾಯಿ ೧೦ ರಿಂದ ೧೫ ರೂ.ಗಳಿಗೆ, ಹೀರೇಕಾಯಿ ೨೫ ರಿಂದ ೩೦ ರೂ.ಗಳಿಗೆ ಮಾರಾಟವಾಗಿದೆ.

ಕೋಟ್

ಕಳೆದ ಒಂದು ವಾರದಿಂದ ಜಡಿ ಮಳೆ ಇದ್ದ ಕಾರಣ ರೈತರು ತರಕಾರಿಗಳನ್ನು ಮಳೆ ನಿಂತ ತಕ್ಷಣ ಒಂದೇ ಬಾರಿಗೆ ಮಾರುಕಟ್ಟೆಗೆ ತಂದಿದ್ದಾರೆ. ಇದರಿಂದ ಬೆಲೆ ಕುಸಿದಿದೆ. ಹಾಗೂ ಮಳೆಯಿಂದ ತರಕಾರಿಗಳು ಗುಣಮಟ್ಟ ಕಳೆದುಕೊಂಡಿವೆ. ತಮಿಳುನಾಡು, ಕೇರಳ ಮಳೆ ಇರುವ ಕಾರಣ ತರಕಾರಿಗಳು ರಫ್ತು ಆಗುತ್ತಿಲ್ಲ. ಪ್ರತಿವರ್ಷ ನವೆಂಬರ್, ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ತರಕಾರಿ ಬೆಲೆಗಳು ಕಡಿಮೆ ಇರುತ್ತವೆ. ಅದೇ ಸಮಯಕ್ಕೆ ಚಂಡಮಾರುತ ಅಪ್ಪಳಿಸಿರುವುದರಿಂದ ತರಕಾರಿ ಬೆಲೆಗಳು ಕುಸಿಯುವಂತಾಗಿದೆ.

-ಪುಟ್ಟರಾಜು, ತರಕಾರಿ ಮಂಡಿ ಮಾಲೀಕ

ಕೋಟ್

ಫೆಂಗಲ್ ಚಂಡಮಾರುತ ತರಕಾರಿ ಬೆಳೆಗಳು ಅಲ್ಲದೆ ರಾಗಿ, ಅವರೆ ಬೆಳೆಗಳ ಮೇಲೆಯೂ ಪ್ರಭಾವ ಬೀರಿದೆ. ಕೊಯಿಲಿಗೆ ಬಂದಿದ್ದ ರಾಗಿ ನೆಲ ಕಚ್ಚುವಂತಾಗಿದೆ. ಅವರೆ ಗಿಡದಲ್ಲಿ ಹೂವು ಉದುರುವಂತಾಗಿದೆ. ತರಕಾರಿ ಬೆಳೆಗಳು ಮಳೆಯಿಂದ ಗುಣಮಟ್ಟ ಕಳೆದುಕೊಂಡಿವೆ. ರೈತರ ಬಳಿ ಕಡಿಮೆ ಬೆಲೆಗೆ ತರಕಾರಿಗಳನ್ನು ಖರೀದಿ ಮಾಡುತ್ತಾರೆ. ಗ್ರಾಹಕರಿಗೆ ಮಾತ್ರ ಬೆಲೆ ಕಡಿಮೆ ಮಾಡಿಲ್ಲ. ವ್ಯಾಪಾರಸ್ಥರು ಇದನ್ನೇ ನೆಪ ಮಾಡಿಕೊಂಡು ಜೋಬು ತುಂಬಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ.

-ಕೃಷ್ಣಪ್ಪ, ರೈತ, ಚಿಕ್ಕಹಸಾಳ.

ಚಿತ್ರ ೦೫ ಕೆ.ಎಲ್.ಆರ್. ೦೧ : ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಮಾರಾಟಕ್ಕೆ ತಂದಿರುವ ತರಕಾರಿಗಳು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net