

ಸರಗೂರು: ಕೇಂದ್ರ ಸರ್ಕಾರದ ಫಸಲ್ ಬಿಮಾ ಯೋಜನೆಯಿಂದ ಖಾಸಗಿ ವಿಮಾ ಕಂಪನಿಗಳಿಗೆ ಲಾಭವಾಗಿದೆ ಹೊರತು ರೈತರಿಗಲ್ಲ. ರೈತರು ಕೃಷಿಗೆ ವೆಚ್ಚ ಮಾಡುವ ಹಣದ ಅರ್ಧದಷ್ಟು ಹೆಚ್ಚು ದರವನ್ನು ಉತ್ಪನ್ನಗಳಿಗೆ ನಿಗದಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಚೇರಿ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಸಭೆಯಲ್ಲಿ ಮಾತನಾಡಿ, ತಾಲೂಕು ಕಾಡಂಚಿನ ಪ್ರದೇಶವಾಗಿದ್ದು ಹಲವು ಸರ್ವೇ ನಂಬರ್‌ಗಳಲ್ಲಿ ರೈತರು ವ್ಯವಸಾಯ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಇದುವರೆಗೂ ಕೆಲ ರೈತರಿಗೆ ಸಾಗುವಳಿ ಪತ್ರ ದೊರಕಿಲ್ಲ. ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಳೆಯೂರು, ಹೆಗ್ಗೂಡಿಲು, ಬೆಜ್ಜಲಪುರ, ನರಸೀಪುರ, ಹಳೆಹೆಗ್ಗುಡಿಲು, ಕೊತ್ತೇಗಾಲ, ಚಿಕ್ಕಬರಗಿ ಕಾಡುಪ್ರಾಣಿಗಳ ಹಾವಳಿ ವಿಪರೀತಿವಾಗಿದೆ. ಆದ್ದರಿಂದ ಹುಸ್ಕೂರು ಹಾಡಿಯಿಂದ ಕೋಣನ ಅಲತ್ತೂರ್‌ವರೆಗೆ ರೈಲ್ವೆ ಕಂಬಿ ಅಥವಾ ತಡೆಗೋಡೆಯನ್ನು ನಿರ್ಮಿಸಲು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗವುದು ಎಂದರು.
ರೈತ ಸಂಘ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಸರಗೂರು ತಾಲೂಕಿನ ಸಿಂಗೇಗೌಡ, ಎಚ್.ಡಿ. ಕೋಟೆ ತಾಲೂಕಿನ ಮಹಾದೇವನಾಯಕ, ಮಹಿಳಾ ಘಟಕದ ಅಧ್ಯಕ್ಷೆ ದೇವಮ್ಮ, ಪ್ರಧಾನ ಕಾರ್ಯದರ್ಶಿ ಮಹಾಲಿಂಗ, ಉಪಾಧ್ಯಕ್ಷ ಹಳೆಯೂರು ಗಣೇಶ, ಹೋಬಳಿ ಅಧ್ಯಕ್ಷ ನಂದೀಶ್ವರಸ್ವಾಮಿ, ನಗರ ಅಧ್ಯಕ್ಷ ಚೆನ್ನನಾಯ್ಕ, ಮೈಸೂರಿನ ಪಿ. ಮರಂಕಯ್ಯ, ಮಂಡಕಳ್ಳಿ ಮಹೇಶ, ಉಪಾಧ್ಯಕ್ಷ ಪಿ.ಪಳನಿಸ್ವಾಮಿ, ಮುಖಂಡರಾದ ಜೆ.ಪಿ. ನಾಗರಾಜು, ದೇವಲಾಪುರ ಕರಿಗೌಡ, ಹೊಸ ಹೊಳಲು ಲಿಂಗರಾಜು, ಎಡತೊರೆ ದೇವರಾಜು, ಯುವ ಘಟಕದ ಅಧ್ಯಕ್ಷ ಮಾದೇವಸ್ವಾಮಿ, ಚಿಕ್ಕಬರಗಿ ನಾಗರಾಜು, ಮಂಜುನಾಥ್ ಭಾಗವಹಿಸಿದ್ದರು.