

ಪಿರಿಯಾಪಟ್ಟಣ: ಸರ್ಕಾರದ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ತಲುಪಿಸಿರುವ ಸಾರ್ಥಕತೆ ನನಗಿದೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.
ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅಕ್ರಮ-ಸಕ್ರಮ ಸಮಿತಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಸಾಗುವಳಿ ಪತ್ರ ವಿತರಿಸಿ ಮಾತನಾಡಿದರು.
ಹಲವು ವರ್ಷಗಳಿಂದ ಅನುಭೋಗದಲ್ಲಿರುವ ಜಮೀನಿನ ಸಾಗುವಳಿ ಪತ್ರ ಪಡೆಯಲು ತಾಲೂಕಿನ ಹಲವರು ಅರ್ಜಿಗಳನ್ನು ಸಲ್ಲಿಸಿದ್ದರು. ಆದರೆ ಕಾನೂನು ಚೌಕಟ್ಟಿನ ವ್ಯಾಪ್ತಿಗೆ ಬರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸಾಗುವಳಿ ಪತ್ರ ವಿತರಿಸಲಾಗಿದೆ ಎಂದು ತಿಳಿಸಿದರು.
ಈ ಹಿಂದೆ ಅಕ್ರಮ-ಸಕ್ರಮ ಸಮಿತಿಗೆ ಯಾವುದೇ ನಿಬಂಧನೆಗಳು ಇರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ನಿಬಂಧನೆಗಳನ್ನು ಹೇರಲಾಗಿದೆ. ಕೆಲವು ನಿಬಂಧನೆಗಳಿಂದ ಅನನುಕೂಲವಾಗಿದ್ದರೆ ಮತ್ತೆ ಕೆಲವು ಅಧಿಕಾರಿಗಳನ್ನು ಕಟ್ಟಿಹಾಕಿವೆ. ಆದ್ದರಿಂದ ಕೆಲವು ರೈತರಿಗೆ ಹಕ್ಕುಪತ್ರಗಳನ್ನು ನೀಡಲಾಗುತ್ತಿಲ್ಲ ಎಂದು ಮಾಹಿತಿ ನೀಡಿದರು.
ಅಕ್ರಮ-ಸಕ್ರಮ ಸಮಿತಿಯು 12 ಸಭೆಗಳನ್ನು ಮಾಡಿ ಅರ್ಜಿಪರಿಶೀಲಿಸಿ ಆಯ್ಕೆಯಾದವರಿಗೆ ಹಕ್ಕುಪತ್ರಗಳನ್ನು ನೀಡಲಾಗಿದೆ. ಗೋಮಾಳ, ಹಿಡುವಳಿ, ಕೆರೆ ಕಟ್ಟೆ ಜಮೀನುಗಳಿಗೆ ಸರ್ಕಾರದಿಂದ ಯಾವುದೇ ಆದೇಶ ಬರದಿರುವ ಕಾರಣ ಅದನ್ನು ಆಯ್ಕೆ ಸಮಿತಿಯಲ್ಲಿ ಇಡಲಾಗಿಲ್ಲ. ಆದೇಶ ಬಂದ ನಂತರ ಪರಿಶೀಲಿಸಿ ಉಳುಮೆ ಮಾಡುತ್ತಿರುವವರಿಗೆ ಸಾಗುವಳಿ ನೀಡಲಾಗುವುದು ಎಂದು ತಿಳಿಸಿದರು.
ತಹಸೀಲ್ದಾರ್ ಕೆ.ಚಂದ್ರಮೌಳಿ ಮಾತನಾಡಿ, ಅರ್ಹ ಫಲಾನುಭವಿಗಳ ಆಯ್ಕೆಯನ್ನು ಸಮಿತಿ ಸಭೆಯಲ್ಲಿ ನಿರ್ಧರಿಸಿ ಸಾಗುವಳಿ ಪತ್ರ ವಿತರಿಸಲಾಗಿದೆ. ಇದಕ್ಕೆ ಶಾಸಕರ ಇಚ್ಛಾಶಕ್ತಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಹಕಾರ ಕಾರಣ ಎಂದರು.
ಅಕ್ರಮ-ಸಕ್ರಮ ಸಮಿತಿ ಸದಸ್ಯರಾದ ಬೆಂಬತ್ತಿ ಚಂದ್ರು, ಲೋಕಪಾಲಯ್ಯ, ನಿರ್ಮಲಾ, ಭೂದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕ ಚಿಕ್ಕಣ್ಣ, ಸರ್ವೇಯರ್ ಎಂ.ಕೆ.ಪ್ರಕಾಶ್, ಶಿರೆಸ್ತೆದಾರ್ ನಂದಕುಮಾರ್ ಮಾತನಾಡಿದರು. ಶಿರಸ್ತೇದಾರ್ ಟ್ರಿಜಾ, ಕಂದಾಯ ನಿರೀಕ್ಷಕ ಪ್ರದೀಪ್ ವಿವಿಧ ಇಲಾಖೆ ಅಧಿಕಾರಿಗಳು, ಮುಖಂಡರು ಇದ್ದರು.