

ಹಾಸನ : ಪ್ಲಾಸ್ಟಿಕ್ ಕಸ ಭೂಮಿಯ ಜೊತೆ ವಿಘಟನೆಗೊಳ್ಳುವುದಿಲ್ಲ ವರ್ಷಗಟ್ಟಲೇ ಭೂಮಿಯ ಮೇಲೆ ಕುಳಿತು ಅದರ ಫಲವತ್ತತೆಯನ್ನು ಹಾಳುಮಾಡಿ ವಿವಿಧ ರೋಗಗಳಿಗೆ ಕಾರಣವಾಗುತ್ತದೆ ಹಾಗಾಗಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿಬೇಕು ಎಂದು ಉಪ ಪೋಲಿಸ್ ವರಿಷ್ಠಾಧಿಕಾರಿ ಉದಯಭಾಸ್ಕರ್ ಸಲಹೆ ನೀಡಿದರು.
ನಗರದ ಜಯನಗರದಲ್ಲಿ ಇತ್ತೀಚೆಗೆ ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಯನಗರ ಘಟಕ ಗ್ರಾಮ ಪಂಚಾಯತಿ ಹರಳಹಳ್ಳಿ, ಹಸಿರುಭೂಮಿ ಪ್ರತಿಷ್ಠಾನ, ವಿವಿಧ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ‘‘ಪ್ಲಾಸ್ಟಿಕ್ ಬಂಧನ ಪರಿಸರ ಸ್ಪಂದನ’’ ಒಂದು ಪ್ರಾಯೋಗಿಕ ಚಟುವಟಿಕೆ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು .
ಮನುಷ್ಯನಿಗೆ ಪರಿಸರ, ನೈರ್ಮಲ್ಯ, ಆರೋಗ್ಯಗಳ ಕುರಿತು ಮೂಲಭೂತ ಅರಿವನ್ನು ನೀಡುವುದು ಬಹಳ ಮುಖ್ಯ ಇದರಿಂದ ಭೂಮಿ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಾಣಲಿದೆ ಈ ನಿಟ್ಟಿನಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿಯವರು ಬಡಾವಣೆಯ ಜನರಲ್ಲಿ ಅರಿವು ಮೂಡಿಸಲು ಪ್ಲಾಸ್ಟಿಕ್ ಕಸ ಸಂಗ್ರಹಿಸಿ ಪ್ಲಾಸ್ಟಿಕ್ ಬಂಧನ ಪರಿಸರ ಸ್ಪಂದನ ಚಟುವಟಿಕೆ ನಡೆಸುವುತ್ತಿರುವುದು ಮಾದರಿ ಚಟುವಟಿಕೆ ಎಂದು ಹೇಳಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಅಹಮದ್ ಹಗರೆ , ಭಾರತದ ಘನನ್ಯಾಯಾಲಯದ ಹಸಿರು ನ್ಯಾಯಪೀಠವು 2021ರಲ್ಲಿ ನೈರ್ಮಲ್ಯವನ್ನು ಸರಿಯಾಗಿ ನಿರ್ವಹಿಸದ ಕಾರಣ ಕರ್ನಾಟಕ ಸರ್ಕಾರಕ್ಕೆ 2900 ಕೋಟಿ ರೂಗಳ ದಂಡ ವಿಧಿಸಿದೆ. ಇದು ಕನ್ನಡಿಗರು ತಲೆತಗ್ಗಿಸುವ ತೀರ್ಪು ಎಂದು ಖೇದ ವ್ಯಕ್ತಪಡಿಸಿದರು .
ನಮ್ಮ ದೇಶ 2050ರೊಳಗೆ ಝೀರೋ ಕಾರ್ಬನ್ ದೇಶವಾಗುವ ಗುರಿಯನ್ನೂ ಕೂಡ ಹೊಂದಿದೆ. ಈ ಹಿನ್ನಲೆಯಲ್ಲಿ ಜುಲೈ 1ರಿಂದ ದೇಶದಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್‌ಗಳ ಎಲ್ಲಾ ತಯಾರಿಕೆ, ಮಾರಾಟ ಮತ್ತು ಬಳಕೆಯ ನಿಷೇಧ ಜಾರಿಗೆ ಬಂದಿದೆ. ಮಾರಿದರೆ, ಕೊಂಡರೆ, ರಸ್ತೆಯಲ್ಲಿ ಬಿಸಾಕಿದರೆ ದಂಡ ಕೂಡ ವಿಧಿಸಬಹುದಾಗಿದೆ ಆದರೆ ಜನರಲ್ಲಿ ಈ ಕುರಿತು ಸಾಕ್ಷರತೆ ಮೂಡಿಸುವುದು ಬಹಳ ಮುಖ್ಯ ಎಂದರು.
ನೀರಿನ ಮೂಲಕ, ಆಹಾರದ ಮೂಲಕ ಹಾಗೂ ಗಾಳಿಯ ಮೂಲಕ ಮಾನವನೂ ಸೇರಿದಂತೆ ಎಲ್ಲ ಜೀವಿಗಳ ದೇಹ ಸೇರಿ ಗಂಟಲುರಿತ, ಕ್ಯಾನ್ಸರ್, ಅಸ್ತಮದಂತಹ ರೋಗಗಳು ಉಲ್ಬಣಗೊಳ್ಳಲು ಕಾರಣವಾಗಿದೆ ಮನೆಗೆ ಬರುವ ಪ್ಲಾಸ್ಟಿಕ್ಗಳನ್ನು ಬೀದಿಗೆಸೆಯದೆ ವೇಸ್ಟ್ ಬಾಟಲುಗಳಲ್ಲಿ ಬಂಧಿಸಿ ಬಹುಪಯೋಗಿ ಚಟುವಟಿಕೆ ಬಳಸಿಕೊಳ್ಳವಂತೆ ತಿಳಿಸಿದರು.
ಹಿರಿಯ ಪರಿಸರ ಸೇವಕಿ ಕಾಂಚನಮಾಲ ಜಾಥಾ ಉದ್ಘಾಟಿಸಿ ಮಾತನಾಡಿದರು. ಹರಳಹಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ತನ್ವೀರ್, ಘಟಕ ಬಿಜಿವಿಎಸ್ ಸದಸ್ಯ ನಾಗೇಶ್ ಹಾಗೂ ಬಿಜಿವಿಎಸ್ ಖಜಾಂಚಿ ಸುರೇಶ್ ಜಾಥಾಕ್ಕೆ ಚಾಲನೆ ನೀಡಿದರು.
ಹಾಸನ ನಗರದ ಜಯನಗರ ರಿಂಗ್ ರಸ್ತೆಯಲ್ಲಿರುವ ಎಸ್.ಬಿ.ಐ ಬ್ಯಾಂಕ್ ರಸ್ತೆಯಿಂದ ಬಡಾವಣೆಯ ವಿವಿಧ ಮಾರ್ಗಗಳಲ್ಲಿ ಪ್ಲಾಸ್ಟಿಕ್ ಮಾಲಿನ್ಯದ ಅಪಾಯಕಾರಿ ಗುಣಗಳನ್ನ ಜನತೆಗೆ ತಿಳಿ ಹೇಳುವ ಪ್ಲೆಕಾರ್ಡ್, ಹಾಡು, ಘೋಷಣೆ ಹಾಕಿ ಪ್ರಮುಖ ಬೀದಿಯಲ್ಲಿ ಜಾಗೃತಿ ಜಾಥಾ ಸಂಚರಿಸಿ ಮನೆಗಳಿಂದ, ಬೀದಿಗಳಿಂದ, ಅಂಡಿಗಳಿಂದ ಪ್ಲಾಸ್ಟಿಕ್ ಸಂಗ್ರಹಿಸಲಾಯಿತು.
ಹಸಿರುಭೂಮಿ ಪ್ರತಿಷ್ಠಾನದ ಅಧ್ಯಕ್ಷ ಎಸ್.ಎಸ್.ಪಾಷಾ, ಖಜಾಂಚಿ ಗಿರಿಜಾಂಬಿಕ, ಸ್ನೇಹ ಸಂಪದ ಮಹಿಳಾ ಸಮಿತಿಯ ಅಧ್ಯಕ್ಷೆ ಮಮತ ಶಿವು, ರೋಟರಿ ಮಿಡ್‌ಟೌನ್‌ನ ರಮಾಕಾಂತ್, ಇನ್ನರ್‌ವ್ಹೀಲ್ ಕ್ಲಬ್‌ನ ಅಧ್ಯಕ್ಕೆ ಭವ್ಯ, ಅಳಿಲು ಸೇವೆಯ ಜಾನಕಿ, ಬಿಜಿವಿಎಸ್ ಜಿಲ್ಲಾದ್ಯಕ್ಷ ಕಾಂತರಾಜು, ಕಾರ್ಯದರ್ಶಿ ಜಯಪ್ರಕಾಶ, ತಾಲ್ಲೂಕು ಅಧ್ಯಕ್ಷೆ ರಾಧಾ, ತಾಲ್ಲೂಕು ಕಾರ್ಯದರ್ಶಿ ವನಜಾಕ್ಷಿ, ಲಯನ್ಸ್ ಕ್ಲಬ್‌ನ ನಾಗೇಶ್, ಕಲಾವಿದ ದೇಸಾಯಿ, ಬಿಜಿವಿಎಸ್ ಘಟಕ ಉಪಾದ್ಯಕ್ಷೆ ಭಾನುಮತಿ ಇತರರು ಇದ್ದರು.