

ಚಿತ್ರದುರ್ಗ: ಪ್ರೀತಿಸುವಂತೆ ಹಿಂದೆ ಬಿದ್ದಿದ್ದ ಯುವಕನೊಬ್ಬನ ಕಿರುಕುಳದಿಂದ ಮನನೊಂದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ.
ಹೊರವಲಯದ ಚಿತ್ರಾ ಡಾನ್ ಬಾಸ್ಕೋ ಕಾಲೇಜಿನ ಮೂರನೇ ಮಹಡಿಯಿಂದ ಜಿಗಿದಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಕಾಲೇಜಿನ ಪ್ರಥಮ ಬಿಎಸ್ಸಿ ವಿದ್ಯಾರ್ಥಿನಿ ಪ್ರೇಮಾ ಬಸವೇಶ್ವರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೆದೇಹಳ್ಳಿ ರಸ್ತೆಯ ಈ ವಿದ್ಯಾರ್ಥಿನಿಗೆ ಬ್ಯಾಂಕ್ ಕಾಲನಿಯ ತರುಣ್ ಎಂಬ ಯುವಕ ವಾಟ್ಸ್‌ಆ್ಯಪ್‌ನಲ್ಲಿ ಪದೇ ಪದೆ ಮೆಸೇಜ್ ಮಾಡುತ್ತಿದ್ದ. ಪ್ರೀತಿಸು ಅಂತ ಬಲವಂತ ಮಾಡುತ್ತಿದ್ದ. ಆದರೆ, ಯುವತಿ ಇದಕ್ಕೆ ಒಪ್ಪದೆ, ನಿರಾಕರಿಸಿದ್ದಾಳೆ ಎಂಬ ಮಾಹಿತಿ ಇದೆ.
ಗುರುವಾರ ಬೆಳಗ್ಗೆಯೂ ಯುವಕ ಸಂದೇಶ ಕಳುಹಿಸಿದ್ದು, ಪ್ರೀತಿಸುವಂತೆ ಬೆದರಿಸಿ ಚಾಕುವಿನ ಚಿತ್ರ ರವಾನಿಸಿದ್ದ. ಇದಕ್ಕೆ ಗಾಬರಿಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ತಂದೆ ಸುಧಾಕರ್ ಸುದ್ದಿಗಾರರಿಗೆ ತಿಳಿಸಿದರು. ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಘಟನಾ ಸ್ಥಳಕ್ಕೆ ಬಡಾವಣೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳಿಸುತ್ತಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ತಿಳಿಸಿದ್ದಾರೆ.