

ಕೋಲಾರ: ಅತಿವೃಷ್ಟಿಯಿಂದ ಬೆಳೆಹಾನಿಯಾಗಿ ರೈತರು ಸಂಕಷ್ಟದಲ್ಲಿದ್ದು, ಅನ್ನದಾತನಿಗೆ ಅಗತ್ಯ ನೆರವು ಒದಗಿಸಲು ಇದು ಸಕಾಲ. ಮತ್ತೆ ಬೆಳೆ ಇಡುವ ಪ್ರಯತ್ನಕ್ಕೆ ಕೈಜೋಡಿಸುವ ನಿಟ್ಟಿನಲ್ಲಿ ಬ್ಯಾಂಕ್ ಹಾಗೂ ಕ್ಸ್‌ಗಳ ಸಿಬ್ಬಂದಿ ಪ್ರಾಮಾಣಿಕ ರೈತರನ್ನು ಗುರುತಿಸಿ ಬೆಳೆ ಸಾಲ ನೀಡಬೇಕು ಎಂದು ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸೂಚಿಸಿದರು.
ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಶನಿವಾರ ನಡೆದ ಬ್ಯಾಂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಡಿಸಿಸಿ ಬ್ಯಾಂಕ್ ರೈತರ ಸಂಸ್ಥೆ, ಅವರ ನೆರವಿಗೆ ಧಾವಿಸುವುದು ನಮ್ಮ ಕರ್ತವ್ಯ ಎಂದರು.
ಬ್ಯಾಂಕ್ ಹಾಗೂ ್ಯಾಕ್ಸ್‌ಗಳ ವ್ಯವಸ್ಥೆ ಸರಿಹೋಗಬೇಕು, ಲೋಪ ಸರಿಪಡಿಸಿಕೊಳ್ಳುವ ಜತೆಗೆ ಠೇವಣಿ ಸಂಗ್ರಹಕ್ಕೆ ಒತ್ತು ನೀಡಬೇಕು. ಸಂಪನ್ಮೂಲ ಕ್ರೂಡೀಕರಣ ಅಗತ್ಯ. ಸಾಲ ವಸೂಲಾತಿಗೂ ಆದ್ಯತೆ ನೀಡಬೇಕು. ಪ್ರಾಮಾಣಿಕರಿಗೆ ಸಾಲ ನೀಡಿದರೆ ವಸೂಲಾತಿ ಕಷ್ಟವಾಗಲಾರದು ಎಂದರು.
ಎನ್‌ಪಿಎ ಶೇ 1ಕ್ಕೆ ತರಲು ಶ್ರಮಿಸಿ: ಬ್ಯಾಂಕಿನ ನಿಷ್ಕ್ರಿಯ ಆಸ್ತಿಯ ಮೌಲ್ಯ ಶೇ.1ಕ್ಕೆ ತರಬೇಕಿದೆ. ಸಿಬ್ಬಂದಿ ಕಚೇರಿಯಲ್ಲಿ ಕುಳಿತು ಕಾಲಹರಣ ಮಾಡದೆ ಸಾಲ ಪಡೆದವರ ಮನೆ ಬಾಗಿಲಿಗೆ ಹೋಗಿ ಮನವೊಲಿಸಿ ಸಾಲ ವಸೂಲಿ ಮಾಡಬೇಕು ಎಂದರು.
ಸೊಸೈಟಿಗಳ ಸಂಪೂರ್ಣ ಕಂಪ್ಯೂಟರೀಕರಣ ದೇಶದಲ್ಲೇ ಮೊದಲು ಎಂಬ ಖ್ಯಾತಿ ಇದೆ, ಇದಕ್ಕೆ ಚ್ಯುತಿ ತರದಂತೆ ಕೆಲಸ ಮಾಡಿ, ಡಿಸೆಂಬರ್ ಅಂತ್ಯದೊಳಗೆ ಎಲ್ಲ ಸೊಸೈಟಿಗಳು ಶೇ.100 ಗಣಕೀಕರಣವಾಗಿರಬೇಕು. ಸೊಸೈಟಿಗಳ ಹಂತದಲ್ಲಿ ಬಾಕಿ ಇರುವ ಆಡಿಟ್ ಅನ್ನು ಗುರುವಾರದೊಳಗೆ ಮುಗಿಸಿ, ವರದಿ ನೀಡಿ, ಆಡಿಟ್ ಮುಗಿಯದಿದ್ದರೆ ಅಂತಹ ಸೊಸೈಟಿಗೆ ಸಾಲ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್, ಹನುಮಂತರೆಡ್ಡಿ, ಎಚ್.ವಿ.ನಾಗರಾಜ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್, ಎಜಿಎಂಗಳಾದ ಬೈರೇಗೌಡ, ಖಲೀಮುಲ್ಲಾ, ನಾಗೇಶ್, ಅಧಿಕಾರಿಗಳಾದ ಹುಸೇನ್ ದೊಡ್ಡಮನಿ, ಬೇಬಿ ಶಾಮಿಲಿ ಉಪಸ್ಥಿತರಿದ್ದರು.
ಮಹಿಳೆಯರೇ ಬ್ಯಾಂಕಿನ ಆಧಾರ: ಕೇಂದ್ರ ಸರ್ಕಾರ ಹಾಗೂ ನಬಾರ್ಡ್ ಬಹು ನಿರೀಕ್ಷಿತ ವಿವಿಧೋದ್ದೇಶ ಸೇವಾ ಕೇಂದ್ರಗಳ ಸ್ಥಾಪನೆಗೆ ಸೊಸೈಟಿಗಳು ಒತ್ತು ನೀಡಬೇಕು, ರೈತರಿಗೆ ಒಂದೇ ಸೂರಿನಡಿ ಅಗತ್ಯಗಳು ಸಿಗುವಂತೆ ಮಾಡುವಲ್ಲಿ ನಿಮ್ಮ ಬದ್ಧತೆ ಇರಲಿ. ಇ-ಶಕ್ತಿ ಅನುಷ್ಠಾನದ ಮೂಲಕ ಭದ್ರತೆ ರಹಿತ ಸಾಲ ಪಡೆಯುತ್ತಿರುವ ಮಹಿಳಾ ಸಂಘಗಳ ಚಟುವಟಿಕೆಗಳನ್ನು ಆನ್‌ಲೈನ್‌ಗೆ ತನ್ನಿ ಈ ಕಾರ್ಯ ಶೀಘ್ರ ಮುಗಿಸಿ, ಮಹಿಳೆಯರು ನಮ್ಮ ಬ್ಯಾಂಕಿನ ಆಧಾರವಾಗಿದ್ದು, ಅವರಿಗೆ ಸಕಾಲಕ್ಕೆ ಸಾಲ ನೀಡುವ ಅಗತ್ಯತೆಯೂ ಇದೆ ಎಂದು ಗೋವಿಂದಗೌಡ ಹೇಳಿದರು.