

ರಿಪ್ಪನ್‌ಪೇಟೆ: ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಕರ್ತವ್ಯ. ಅನೇಕ ಸವಾಲಿನ ನಡುವೆಯೂ ಅಧಿಕಾರಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಸಮೀಪದ ಗರ್ತಿಕೆರೆಯಲ್ಲಿ ಗ್ರಾಪಂ ಹಾಗೂ ಗ್ರಾಮಸ್ಥರಿಂದ ಆಯೋಜಿಸಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪದಕ ಪುರಸ್ಕೃತ ರಾಮನಗರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಟಿ.ವಿ.ಸುರೇಶ್ ದಂಪತಿಯನ್ನು ಸನ್ಮಾನಿಸಿ ಮಾತನಾಡಿದರು.
ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಕಾಲ ಕಾರ್ಯ ನಿರ್ವಹಿಸಿ ಪ್ರಾಮಾಣಿಕರಾಗಿ ಇರುವುದು ಕಷ್ಟದ ಕೆಲಸ. ಸುರೇಶ ಅವರಂತಹ ಪ್ರಾಮಾಣಿಕ ಅಧಿಕಾರಿಗಳಿಂದಲೇ ಪೊಲೀಸ್ ಇಲಾಖೆಯ ಗೌರವ ಹೆಚ್ಚುತ್ತದೆ. ಇಂದಿನ ಯುವಕರಿಗೆ ಸುರೇಶ್ ಮಾದರಿ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಟಿ.ವಿ.ಸುರೇಶ್, ತಂದೆ-ತಾಯಿಗಳ ಆಶೀರ್ವಾದ, ನಮ್ಮೂರಿನ ಗುರುಹಿರಿಯರ ಮಾರ್ಗದರ್ಶನದಿಂದ ಮುಖ್ಯಮಂತ್ರಿಗಳ ಪದಕ ದೊರೆತಿರುವುದು ಸಂತೋಷದ ವಿಷಯ. ಅದರಲ್ಲಿಯೂ ತವರೂರಿನ ಜನ ಸನ್ಮಾನಿಸಿರುವುದು ಅವಿಸ್ಮರಣೀಯ ಕ್ಷಣ ಎಂದರು.ಮಾಜಿ ಶಾಸಕ ಜಿ.ಡಿ.ನಾರಾಯಣಪ್ಪ, ಗ್ರಾಪಂ ಅಧ್ಯಕ್ಷ ಸಚಿನ್ ಗೌಡ, ಮುಖಂಡರಾದ ಬಷೀರ್ ಅಹಮ್ಮದ್, ಅನಂತಮೂರ್ತಿ, ರಾಜು, ಸುರೇಂದ್ರ, ಟೂಕಪ್ಪ ಇತರರಿದ್ದರು.