ಪ್ರಾಥಮಿಕ ಶಾಲಾ ಶಿಕ್ಷಣ ಮಾತೃಭಾಷೆಯಲ್ಲೇ ನೀಡಲಿ

BIRUR gorucha
ಬೀರೂರಿನ ಕನ್ನಡ ಸಂಘದ ಆವರಣದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಅವರನ್ನು ಸನ್ಮಾನಿಸಲಾಯಿತು. ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಸೂರಿ ಶ್ರೀನಿವಾಸ್, ಸಿಂಗಟಗೆರೆ ಸಿದ್ದಪ್ಪ, ಹರಿಪ್ರಸಾದ್, ಸೀತಾಲಕ್ಷ್ಮೀ, ನಾಗೇಂದ್ರ ಶೆಟ್ಟಿ ಇತರರಿದ್ದರು.
Published on

ಬೀರೂರು: ಮಕ್ಕಳ ಭವಿಷ್ಯಕ್ಕಾಗಿ ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗಿರುವ ಪಾಲಕರು, ಪ್ರಾದೇಶಿಕ ಭಾಷೆಯಲ್ಲಿ ಕಲಿತು ಉದ್ಯೋಗದಿಂದ ವಂಚಿತರಾಗುತ್ತಾರೆ ಎಂಬ ಸಂದೇಹದಲ್ಲಿದ್ದಾರೆ. ಆದ್ದರಿಂದ ಸರ್ಕಾರ ಪ್ರಾದೇಶಿಕ ಭಾಷೆಗೆ ಅಗ್ರಸ್ಥಾನ ನೀಡುವುದರ ಜತೆಗೆ ಪಾಲಕರಲ್ಲಿ ಭರವಸೆ ಮೂಡಿಸಲಿ ಎಂದು ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿಯೋಜಿತ ಅಧ್ಯಕ್ಷ ಗೊ.ರು.ಚನ್ನಬಸಪ್ಪ ತಿಳಿಸಿದರು.

ಪಟ್ಟಣದ ಕನ್ನಡ ಸಂಘದಲ್ಲಿ ಮಂಗಳವಾರ ಕನ್ನಡ ಸಂಘ, ಪುರಸಭೆ, ನಿವೃತ್ತ ನೌಕರರ ಸಂಘ, ಅಕ್ಕಮಹಾದೇವಿ ಮಹಿಳಾ ಸಮಾಜ ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂತಾರಾಷ್ಟ್ರೀಯ ಸಂಪರ್ಕ ಭಾಷೆಯಾದ ಇಂಗ್ಲಿಷ್ ಕಲಿಯುವುದರ ಜತೆಗೆ ಕನ್ನಡ ಭಾಷೆಯಲ್ಲಿ ವ್ಯಾಸಂಗ ಮಾಡಿದವರಿಗೂ ಉದ್ಯೋಗದಲ್ಲಿ ಅವಕಾಶ ಕಲ್ಪಿಸಿಕೊಡಬೇಕು. ಸಂವಿಧಾನವು ಪ್ರಾದೇಶಿಕ ಭಾಷೆಗಳಿಗೆ ಸೂಕ್ತ ಮನ್ನಣೆ ದೊರಕಬೇಕು ಎಂದು ಸ್ಪಷ್ಟಪಡಿಸಿದೆ. ಆದ್ದರಿಂದ ಸರ್ಕಾರ ಬದ್ಧತೆ ಮೂಲಕ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮಾತೃಭಾಷೆ ಮೂಲಕವೇ ನೀಡಬೇಕು. ಈ ಆಗ್ರಹವನ್ನು ಜಗತ್ತು ಒಪ್ಪಿಕೊಂಡಿದೆ ಎಂದು ಸ್ಪಷ್ಟಪಡಿಸಿದರು.

ಸಾಹಿತ್ಯಕ ಚಟುವಟಿಕೆಗಳಲ್ಲಿ ಸಾಹಿತ್ಯವನ್ನು ಅಧ್ಯಯನ ಮಾಡಿದವರೇ ಕ್ರಿಯಾಶೀಲರಾಗಿಲ್ಲ. ಅಂಥವರಿಗೆ ನಿಮ್ಮ ಸಂದೇಶವೇನು? ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಸಿದ ಅವರು, ಕನ್ನಡದ ಬಗ್ಗೆ ಆಸಕ್ತಿ ಇದ್ದವರು ಕನ್ನಡದ ಎಲ್ಲ ಕೆಲಸಗಳಲ್ಲಿ ಪಾಲ್ಗೊಂಡು ಕನ್ನಡ ಕಲಿಕೆಯ ಅಗತ್ಯ ಇದ್ದವರಿಗೆ ತರಬೇತಿ ನೀಡಲು ಪಾಲ್ಗೊಳ್ಳಬೇಕು ಎಂದರು.

ಚಟ್ನಳ್ಳಿ ಮಹೇಶ್ ಮಾತನಾಡಿ, ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ನಮ್ಮ ಜಿಲ್ಲೆಯ ಹೆಮ್ಮೆಯ ಪುತ್ರ ಗೊ.ರು.ಚ ಅವರಿಗೆ ಲಭಿಸಿರುವುದು ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುವಷ್ಟು ಸಂಭ್ರಮದ ವಿಷಯವಾಗಿದೆ ಎಂದರು.

ಕನ್ನಡ ಸಂಘದ ಪರವಾಗಿ ಗೌರವ ಸಮರ್ಪಣೆ ಮಾಡಿದ ಸಂಘದ ಅಧ್ಯಕ್ಷ ವಿಶ್ವನಾಥಗೌಡ ಮಾತನಾಡಿ, ಗೊ.ರು.ಚ ಬೀರೂರಿನಲ್ಲಿ ಪ್ರೌಢಶಾಲೆ ವ್ಯಾಸಂಗ ಮಾಡಿದವರು ಎನ್ನುವುದೇ ನಮಗೆಲ್ಲ ಹೆಮ್ಮೆಯ ವಿಷಯ. ಅವರು ಶತಾಯುಷಿಯಾಗಲಿ, ನಾವೆಲ್ಲರೂ ಸೇರಿ ಅವರ ಶತಮಾನೋತ್ಸವ ಸಂಭ್ರಮದಲ್ಲಿ ಪಾಲ್ಗೊಳ್ಳುವಂತಾಗಲಿ ಎಂದು ಆಶಿಸಿದರು.

ಪಟ್ಟಣದ ರಂಭಾಪುರಿ ಖಾಸಾಶಾಖಾ ಮಠದ ಪರವಾಗಿ ರುದ್ರಮುನಿ ಶಿವಾಚಾರ್ಯ ಶ್ರೀ ಅವರು ಗೊ.ರು.ಚ ಅವರನ್ನು ಗೌರವಿಸಿದರು. ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು, ಮಲ್ಲಿಗೆ ಬಳಗದ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ ಬೀರೂರು ಹೋಬಳಿ ಘಟಕದ ಪದಾಧಿಕಾರಿಗಳು, ವೀರಶೈವ ನೌಕರರ ಸಂಘದ ಪದಾಧಿಕಾರಿಗಳು, ಅಕ್ಕಮಹಾದೇವಿ ಮಹಿಳಾ ಸಮಾಜದ ಸದಸ್ಯರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಗೊ.ರು.ಚ ಅವರನ್ನು ಸನ್ಮಾನಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ತಾಲೂಕು ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ಬೀರೂರು ಹೋಬಳಿ ಅಧ್ಯಕ್ಷ ಹರಿಪ್ರಸಾದ್, ನಗರ ಕಸಾಪ ಘಟಕ ಅಧ್ಯಕ್ಷೆ ಸೀತಾಲಕ್ಷ್ಮೀ, ಕನ್ನಡ ಸಂಘದ ಕಾರ್ಯದರ್ಶಿ ನಾಗೇಂದ್ರ ಶೆಟ್ಟಿ, ಪದಾಧಿಕಾರಿಗಳಾದ ಡಿ.ಆರ್.ರಮೇಶ್, ಶಂಕರ್, ನಟರಾಜ್, ಸಿ.ಎಂ.ಚಂದ್ರಶೇಖರ್, ಎಂ.ಷಡಾಕ್ಷರಪ್ಪ, ಸೋಮಶೇಖರ್, ಸ್ವರ್ಣ ಗುರುನಾಥ್, ಮಂಜುಳಾ, ಪ್ರೌಢಶಾಲಾ ಶಿಕ್ಷಕರ ಸಂಘದ ಸಂಪತ್‌ಕುಮಾರ್, ಶಿಕ್ಷಕರ ಸಂಘ ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net