

ಚಿತ್ರದುರ್ಗ: ಪ್ರಸಕ್ತ ವರ್ಷದಲ್ಲೇ ಅಂಗವಿಕಲರ ಜನಗಣತಿ ಕೈಗೊಳ್ಳಲಾಗುವುದು ಎಂದು ಅಂಗವಿಕಲ ವ್ಯಕ್ತಿಗಳ ಹಕ್ಕು ಅಧಿನಿಯಮ ಅನುಷ್ಠಾನದ ರಾಜ್ಯ ಆಯುಕ್ತ ದಾಸ್‌ಸೂರ್ಯವಂಶಿ ಹೇಳಿದರು.
ಜಿಲ್ಲಾ ಬಾಲಭವನದಲ್ಲಿ ಬುಧವಾರ ಜಿಲ್ಲೆಯ ವಿಆರ್‌ಡಬ್ಲ್ಯೂ, ಎಂಆರ್‌ಡಬ್ಲ್ಯೂಗಳ ತರಬೇತಿ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿ,ದೇಶದಲ್ಲೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಅಂಗವಿಕಲರ ಜನಗಣತಿ ನಡೆಸಲು ನಿರ್ಧರಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿ, ಮುಖ್ಯ ಕಾರ‌್ಯದರ್ಶಿಗಳಿಗೆ ಪತ್ರ ಬರೆಯಲಾಗಿತ್ತು. ಅಂಗವಿಕಲರ ಸಬಲೀಕರಣ, ಸುಧಾರಣೆಗಾಗಿ ಈ ಗಣತಿಯಿಂದ ನಿಖರ ಮಾಹಿತಿ ಲಭ್ಯವಾಗಲಿದೆ. ಸಿಎಂ ಸಿದ್ದರಾಮಯ್ಯ ಅವರು ತಮ್ಮ ಈ ಬಾರಿಯ ಬಜೆಟ್‌ನಲ್ಲಿ ಅಂಗವಿಕಲರ ಸಮೀಕ್ಷೆ ನಡೆಸುವುದಾಗಿ ಘೋಷಿಸಿದ್ದರು. ಪ್ರಸಕ್ತ ವರ್ಷದಲ್ಲಿಯೇ ಗಣತಿ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ವಿಆರ್‌ಡಬ್ಲ್ಯೂ, ಎಂ.ಆರ್.ಡಬ್ಲ್ಯೂಗಳಿಗೆ ತರಬೇತಿ ನೀಡಲಾಗುವುದು. ಎಷ್ಟು ಜನ ಅಂಗವಿಕಲರು ಯುಡಿಐಡಿ ಕಾರ್ಡ್ ಪಡೆದಿದ್ದಾರೆ, ಇನ್ನೂ ಎಷ್ಟು ಜನರದು ಬಾಕಿ ಇವೆ, ಅಂಗವಿಕಲರ ಮಾಸಾಶನ ಎಷ್ಟು ಜನರಿಗೆ ತಲುಪುತಿದೆ ಎಂಬಿತ್ಯಾದಿ ಮಾಹಿತಿಯನ್ನೂ ಮನೆ, ಮನೆಗೆ ಭೇಟಿ ನೀಡಿ ದಾಖಲಿಸಲಾಗುವುದು.
ಗ್ರಾಪಂ ಮಟ್ಟದಲ್ಲಿ ಕನಿಷ್ಠ 2 ಅಂಗವಿಕಲರ ಸ್ವ-ಸಹಾಯ ಗುಂಪುಗಳನ್ನು ಶೀಘ್ರ ರಚಿಸಬೇಕು. ಈ ನಿಟ್ಟಿನಲ್ಲಿ ವಿಆರ್‌ಡಬ್ಲ್ಯೂಗಳು ಕಾ ರ‌್ಯ ಪ್ರವೃತ್ತರಾಗಬೇಕು. ಮುಂದಿನ ದಿನಗಳಲ್ಲಿ ಸುಗಮ್ಯ ಭಾರತ ಯಾತ್ರಾ ನಡೆಯಲಿದ್ದು, ಅಂಗವಿಕಲರ ಸಬಲೀಕರಣಕ್ಕಾಗಿ ಉತ್ತಮ ಸ ಮೀಕ್ಷೆ ನಡೆಸಬೇಕಿದೆ. ಕಾರ್ಮಿಕ ಕಾಯ್ದೆ ಅನುಸಾರ ವಿಆರ್‌ಡಬ್ಲ್ಯೂ, ಎಂ.ಆರ್.ಡಬ್ಲ್ಯೂಗಳಿಗೆ ಕನಿಷ್ಠ ವೇತನ ನೀಡಲು ಕ್ರಮ ವಹಿಸು ವುದಾಗಿ ದಾಸ್‌ಸೂರ್ಯವಂಶಿ ಹೇಳಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಮಾತನಾಡಿ, ಗ್ರಾಪಂ, ಸರ್ಕಾರಿ ಆಸ್ಪತ್ರೆ, ಗ್ರಂಥಾಲಯ, ಬ್ಯಾಂಕ್‌ಗಳು, ಪ್ರವಾಸಿ ಮಂದಿರ ಸೇರಿದಂತೆ ಸಾರ್ವಜನಿಕ ಕಟ್ಟಡಗಳು ಅಂಗವಿಕಲರ ಸ್ನೇಹಿಯಾಗಿರಬೇಕೆಂದರು.
ರ‌್ಯಾಂಪ್, ರೇಲಿಂಗ್ಸ್‌ಗಳ ನಿಖರ ಮಾಹಿತಿ ಸಂಗ್ರಹಿಸಿದರೆ ಮುಂದಿನ ದಿನಗಳಲ್ಲಿ ಕೇಂದ್ರದ ಕ್ರಿಯಾ ಯೋಜನೆ ರೂಪಿಸಿ, ಅನುದಾನದ ಬೇಡಿಕೆ ಸಲ್ಲಿಸುವ ಸಲುವಾಗಿ ಸುಗಮ್ಯ ಭಾರತ ಯಾತ್ರೆ ವೇಳೆ ಪ್ರತಿ ಸರ್ಕಾರಿ ಕಟ್ಟಡದ ಅಸೆಸ್‌ಮೆಂಟ್ ಮಾಡಬೇಕಿದೆ. ಈ ನಿಟ್ಟಿನಲ್ಲಿ ಯೆಸ್ ಟು ಅಕ್ಸೆಸ್ ಮೊಬೈಲ್ ಆ್ಯಪ್‌ನ್ನೂ ನೀಡಲಾಗಿದ್ದು, 15 ದಿನದೊಳಗೆ ಈ ಕೆಲಸಗಳನ್ನು ಪೂರ್ಣಗೊಳಿಸಿ ವರದಿ ಸಲ್ಲಿಸಬೇಕಿದೆ ಎಂದರು.
ಅಂಗವಿಕಲ ವ್ಯಕ್ತಿಗಳ ಹಕ್ಕು ಅಧಿನಿಯಮ ಅನುಷ್ಠಾನದ ರಾಷ್ಟ್ರೀಯ ಆಯುಕ್ತ ಗೋವಿಂದರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಪವಿತ್ರಾ, ಚಿತ್ರದುರ್ಗ ತಾಲೂಕು ಎಂಆರ್‌ಡಬ್ಲ್ಯೂ ಮೈಲಾರಪ್ಪ ಮತ್ತಿತರರು ಇದ್ದರು.