

ಶಿವಮೊಗ್ಗ: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಮಾಡಿದ ಎಲ್ಲ ಆರೋಪಿಗಳನ್ನು ಶೀಘ್ರವೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಎಸ್‌ಎನ್‌ಜಿವಿ (ಶ್ರೀ ನಾರಾಯಣಗುರು ವಿಚಾರ ವೇದಿಕೆ)ಯ ಜಿಲ್ಲಾ ಘಟಕದ ಪದಾಧಿಕಾರಿಗಳು ಶುಕ್ರವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ದುಷ್ಕರ್ಮಿಗಳು ಪ್ರವೀಣ್ ನೆಟ್ಟಾರು ಅವರನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಅಮಾನುಷವಾಗಿ ಹತ್ಯೆ ಮಾಡಿದ್ದಾರೆ. ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರೆಂದು ವಿಶ್ವಮಾನವ ಸಂದೇಶವನ್ನು ಇಡೀ ಮನುಕುಲಕ್ಕೆ ಸಾರಿದ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಸಿದ್ಧಾಂತವನ್ನು ಪ್ರತಿಯೊಬ್ಬರು ಪಾಲಿಸಬೇಕಾಗಿದೆ. ಇಂತಹ ಸಂದರ್ಭದಲ್ಲೇ ಕೆಲ ಸಮಾಜಘಾತುಕ ದುಷ್ಟಶಕ್ತಿಗಳು ಅರಾಜಕತೆ ಸೃಷ್ಠಿ ಮಾಡುವ ಜತೆಗೆ ಸಮಾಜದಲ್ಲಿ ಸಾರ್ವಜನಿಕರು ನೆಮ್ಮದಿಯಿಂದ ಬದುಕಲು ಬಿಡದೇ ಅಶಾಂತಿ ಉಂಟು ಮಾಡುತ್ತಿದ್ದಾವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದುಷ್ಟಶಕ್ತಿಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು. ಹತ್ಯೆಗೀಡಾದ ಪ್ರವೀಣ್ ಅವರ ಪತ್ನಿಗೆ ಸರ್ಕಾರಿ ನೌಕರಿ ನೀಡುವುದರ ಜತೆಗೆ ಒಂದು ಕೋಟಿ ರೂ. ಪರಿಹಾರವನ್ನು ಅವರ ಕುಟುಂಬಕ್ಕೆ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ವೇದಿಕೆ ಜಿಲ್ಲಾಧ್ಯಕ್ಷ ಪ್ರವೀಣ್ ಹಿರೇಇಡಗೋಡು, ರಾಜ್ಯ ಕಾನೂನು ಸಲಹೆಗಾರ ಕೆ.ಎಲ್.ಉಮೇಶ್, ಉಪಾಧ್ಯಕ್ಷ ಕೆ.ಪಿ.ಲಿಂಗೇಶ್, ಪ್ರಧಾನ ಕಾರ್ಯದರ್ಶಿ ವಿಕಾಸ್ ಕುನ್ನೂರು, ಸಂಘಟನಾ ಕಾರ್ಯದರ್ಶಿಗಳಾದ ಹೊದಲ ಶಿವಕುಮಾರ್, ಸಂದೇಶ್ ನಾಯಕ್, ಗೌರವ ಸಲಹೆಗಾರ ವೀರಭದ್ರಪ್ಪ ಇಂಡವಳ್ಳಿ, ಖಜಾಂಚಿ ಮೋಹನ್ ಸಿಂಧುವಾಡಿ, ಹರಿಯಪ್ಪ ನಾಯಕ್, ಸುಧಾಕರ್ ಶೆಟ್ಟಿಹಳ್ಳಿ, ಕೇಶವಮೂರ್ತಿ, ಎಂ.ಕೆ.ರಮೇಶ್, ನಟರಾಜ್, ಬಿ.ಶಿವಪ್ಪ, ಗಣಪತಿ, ವಸಂತ ಪೂಜಾರಿ, ಅಖಿಲೇಶ್, ಗಣೇಶ್, ಎಸ್,ಜೆ.ಮಂಜುನಾಥ್, ಪರಮೇಶ್, ಸ್ವಾಮಿರಾವ್, ವಿನೋದ್, ಲಿಂಗರಾಜ್ ಮತ್ತಿತರರು ಉಪಸ್ಥಿತರಿದ್ದರು.