ಪ್ರವಾಹದಿಂದ ಮುಳುಗಡೆ ಭೀತಿ

1690203267240
Published on

ಕೊಳ್ಳೇಗಾಲ: ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಅಧಿಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯಗಳು ಭರ್ತಿಯಾಗುತ್ತಿವೆ. ಇದರಿಂದ ಪ್ರತಿ ವರ್ಷದಂತೆ ತಾಲೂಕಿನ ನದಿ ತೀರದ ಗ್ರಾಮಗಳು ಪ್ರವಾಹದ ಭೀತಿ ಎದುರಿಸುವಂತಾಗಿದ್ದು, ತಾಲೂಕು ಆಡಳಿತ ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಬೇಕಿದೆ.


ಕಳೆದ 4 ವರ್ಷಗಳಿಂದಲೂ ಸತತವಾಗಿ ಪ್ರವಾಹದಿಂದ ಸಂಕಷ್ಟ ಎದುರಿಸುತ್ತಿರುವ ಈ ಗ್ರಾಮಗಳ ಜನರು ಈ ಬಾರಿಯೂ ಪ್ರವಾಹ ಭೀತಿಯಲ್ಲಿ ಇದ್ದಾರೆ. ಸತತ ಮಳೆಯಿಂದ ಜಲಾಶಯದಿಂದ ಹೆಚ್ಚು ನೀರು ಹೊರ ಬಿಡುತ್ತಿರುವ ಕಾರಣ ನದಿ ಪಾತ್ರದಲ್ಲಿರುವ ಗ್ರಾಮಗಳ ಜನರು ಆತಂಕದಲ್ಲಿದ್ದಾರೆ.


ಕೇರಳದ ವಯನಾಡು ಜಿಲ್ಲೆಯಲ್ಲಿ ವರುಣ ಆರ್ಭಟಿಸುತ್ತಿರುವುದರಿಂದ ಕಬಿನಿ ಜಲಾಶಯಕ್ಕೆ ನಿರಂತರವಾಗಿ ನೀರು ಹರಿದು ಬರುತ್ತಿದೆ. ಅಣೆಕಟ್ಟು ತುಂಬಲು ಕೇವಲ 2 ಅಡಿ ಬಾಕಿ ಉಳಿದಿದೆ.


ಹಾಗೆಯೆ, ಕೊಡುಗು ಜಿಲ್ಲೆ ಮತ್ತು ಪಶ್ಚಿಮಘಟ್ಟಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಹಾರಂಗಿ ಜಲಾಶಯದಿಂದ ಹೆಚ್ಚುವರಿ ನೀರು ಹೊರ ಹೋಗುತ್ತಿರುವುದರಿಂದ ಕೆಆರ್‌ಎಸ್ ಜಲಾಶಯವೂ ಭರ್ತಿಯಾಗುವತ್ತ ಸಾಗಿದೆ. ಮುಂದಿನ ದಿನಗಳಲ್ಲಿ ಕಬಿನಿ ಮತ್ತು ಕೆಆರ್‌ಎಸ್ ಅಣೆಕಟ್ಟೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುವ ಸಾಧ್ಯತೆ ಇರುವುದರಿಂದ ನದಿಯಲ್ಲಿ ಪ್ರವಾಹ ಹೆಚ್ಚಳವಾಗಿ ಯಾವುದೇ ಕ್ಷಣದಲ್ಲಾದರೂ ಅಪಾಯದ ಮಟ್ಟ ಮೀರಬಹುದು.


ಇದರಿಂದಾಗಿ ತಾಲೂಕಿನ ಮುಳ್ಳೂರು, ಹಳೇ ಹಂಪಾಪುರ, ದಾಸನಪುರ, ಹಳೇ ಅಣಗಳ್ಳಿ, ಹರಳೆ, ಯಡಕುರಿಯಾ ಇನ್ನಿತರ ನದಿ ಪಾತ್ರದ ಗ್ರಾಮಗಳು ಮುಳುಗಡೆಗೊಳಗಾಗುವ ಆತಂಕ ಎದುರಿಸುತ್ತಿವೆ. ಕಪಿಲಾ ಮತ್ತು ಕಾವೇರಿ ನದಿಗಳು ತಿ.ನರಸೀಪುರದ ಬಳಿ ಒಂದಾಗುತ್ತವೆ. ಇದರಿಂದ ಮುಂದೆ ಸಾಗುವ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿದರೆ, ಕೆಳಭಾಗದಲ್ಲಿರುವ ಕೊಳ್ಳೇಗಾಲ ತಾಲೂಕಿನ ನದಿ ಪಾತ್ರದ ಜನರು ಪ್ರತಿವರ್ಷ ಪ್ರವಾಹದ ತೊಂದರೆಗೆ ಸಿಲುಕುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net