ಪ್ರವಾಹದಿಂದ ನಲುಗಿರುವ ರಾಮನಾಥಪುರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಭೇಟಿ

IMG-20200808-WA0016.jpg
Published on

ಅರಕಲಗೂಡು: ಕಾವೇರಿ ಜಲ ಪ್ರಳಯಕ್ಕೆ ಸಿಲುಕುವುದನ್ನು ತಪ್ಪಿಸುವ ಉದ್ದೇಶದಿಂದ ರಾಮನಾಥಪುರದಲ್ಲಿ ನದಿ ದಂಡೆಗೆ ರಕ್ಷಣಾ ತಡೆಗೋಡೆ ಸ್ಥಾಪಿಸುವ ಸಂಬಂಧ ಮುಖ್ಯಮಂತ್ರಿಗಳ ಗಮನಕ್ಕೆ ತಂದು ನೆರೆ ಪೀಡಿತರಿಗೆ ಅಗತ್ಯ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಭರವಸೆ ನೀಡಿದರು.

ತಾಲೂಕಿನ ದೇವಾಲಯಗಳ ಊರು ರಾಮನಾಥಪುರದಲ್ಲಿ ಪ್ರವಾಹ ಪೀಡಿತ ಪ್ರದೇಶಕ್ಕೆ ಇಂದು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ವೇಳೆ ಕಳೆದ ಮೂರು ವರ್ಷಗಳಿಂದ ತಡೆಗೋಡೆ ಕಟ್ಟುವುದಾಗಿ ಬರಿ ಅಶ್ವಾಸನೆ ನೀಡಲಾಗುತ್ತಿದೆ ಹೊರತು ನಿವಾಸಿಗಳ ತಡೆಗೋಡೆ ಕನಸು ಇಂದಿಗೂ ನನಸಾಗಿಲ್ಲ ಎಂದು ಸ್ಥಳೀಯರು ಸಚಿವರಲ್ಲಿ ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಸಚಿವರು ನೆರೆ ಹಾವಳಿ ತಪ್ಪಿಸಲು ಶಾಶ್ವತ ಪರಿಹಾರ ಕಲ್ಪಿಸುವುದಾಗಿ ತಿಳಿಸಿದರು.

ಜಿಲ್ಲಾಡಳಿತ ಪ್ರವಾಹ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುತ್ತಿದ್ದು ಸಂಕಷ್ಟದಲ್ಲಿರುವ ಜನರಿಗೆ ನೆರವಾಗುತ್ತಿದೆ ಎಂದರು.

ಮಾಜಿ ಸಚಿವ ಎ. ಮಂಜು ಮಾತನಾಡಿ, ಹೊಳೆನರಸೀಪುರದಲ್ಲಿ ಹೇಮಾವತಿ ನದಿ ದಂಡೆಗೆ ಕಟ್ಟಿದಂತೆ ರಾಮನಾಥಪುರದಲ್ಲೂ ಕಾವೇರಿ ನದಿಗೆ ತಡೆಗೋಡೆ ಅಗತ್ಯವಿದೆ, ಈ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದರು.

ಶಾಸಕ ಎ.ಟಿ. ರಾಮಸ್ವಾಮಿ ಮಾತನಾಡಿ, ಮಾಜಿ ಸಚಿವರು ಹೇಳಿದಂತೆ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದು ನದಿ ದಂಡೆಗೆ ತಡೆಗೋಡೆ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು, ಸಾರ್ವಜನಿಕರ ಪರವಾಗಿ ಇದು ನನ್ನ ಮನವಿ ಎಂದು ಕೋರಿದರು.

ತಾಲೂಕಿನಲ್ಲಿ ಮಳೆ ಗಾಳಿಗೆ ಸದ್ಯಕ್ಕೆ ಒಂದೂವರೆ ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದ ಮುಸುಕಿನ ಜೋಳ ಹಾಳಾಗಿದೆ. ಪ್ರವಾಹ ಇಳಿದ ನಂತರ ಎಲ್ಲ ಇಲಾಖೆಗಳಿಂದ ಪ್ರವಾಹದಿಂದ ಉಂಟಾದ ನಿಖರವಾದ ಹಾನಿ ವರದಿ ಪಡೆದು ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ನೆರೆ ಸಂಕಷ್ಟಕ್ಕೆ ಸರ್ಕಾರ ಎಲ್ಲ ರೀತಿಯಲ್ಲೂ ಸ್ಪಂದಿಸುವ ಆಶಾಭಾವನೆ ಇದೆ ಎಂದು ಹೇಳಿದರು.

ನಂತರ ತಾಲೂಕಿನಲ್ಲಿ ಕಳೆದ‌ ಮೂರು ದಶಕಗಳಿಂದ ರಾಜಕೀಯ ಬದ್ಧ ವೈರಿಗಳೆಂದೇ ಬಿಂಬಿತವಾಗಿರುವ ಮಾಜಿ ಸಚಿವ ಎ. ಮಂಜು, ಶಾಸಕ ಎ.ಟಿ. ರಾಮಸ್ವಾಮಿ ಅವರು ಸಚಿವರೊಂದಿಗೆ ಒಂದೇ ಕಾರಿನಲ್ಲಿ ಪ್ರಯಾಣಿಸಿ ಅಚ್ಚರಿ ಮೂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net