ಪ್ರವಾಹ ಎದುರಿಸಲು ಸಕಲ ಸಿದ್ಧತೆ; ವೈಫಲ್ಯದಿಂದ ಕಲಿತ ಪಾಠ, ಮೊದಲ ಬಾರಿ ಗ್ರಾಮ ಮಟ್ಟದ ಕ್ರಿಯಾ ಯೋಜನೆ

page 1 2
Published on

| ರುದ್ರಣ್ಣ ಹರ್ತಿಕೋಟೆ

ಬೆಂಗಳೂರು: ಹಿಂದೆಂದೂ ಕಂಡು ಕೇಳರಿಯದಂತಹ ಪ್ರವಾಹದಿಂದ ಕಳೆದ ವರ್ಷ ಉಂಟಾದ ಹಾನಿಯ ಪರಿಹಾರ ಕಾರ್ಯದಲ್ಲಿ ಆದ ವೈಫಲ್ಯಗಳು ಈ ವರ್ಷ ಮತ್ತೆ ಮರುಕಳಿಸದಂತೆ ಸರ್ಕಾರ ಎಲ್ಲ ಮುನ್ನೆಚ್ಚರಿಕೆ ಕೈಗೊಂಡಿದೆ. ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಗ್ರಾಮವಾರು ಕ್ರಿಯಾ ಯೋಜನೆ ಸಿದ್ಧಪಡಿಸುತ್ತಿದೆ.

118 ವರ್ಷಗಳಲ್ಲಿಯೇ ಕಂಡು ಕೇಳರಿಯದಂತಹ ಪ್ರವಾಹ ದಿಂದ ಕಳೆದ ವರ್ಷ 25 ಜಿಲ್ಲೆಗಳ 119 ತಾಲೂಕುಗಳು ಬಾಧಿತ ವಾದವು. ಸಾವಿರಾರು ಗ್ರಾಮಗಳಲ್ಲಿ ಲಕ್ಷಾಂತರ ಜನ ಸಂಕಷ್ಟಕ್ಕೆ ಒಳಗಾದರು. ಮನೆ, ಬೆಳೆ ಕಳೆದುಕೊಂಡರು. ಪ್ರಸ್ತುತ ಕರೊನಾ ಅಟ್ಟಹಾಸ ನಿಯಂತ್ರಣ ಪ್ರಯತ್ನದ ಜತೆಯಲ್ಲೇ ಮುಂದೆ ಎದುರಾಗಬಹುದಾದ ಪ್ರವಾಹದ ಬಗ್ಗೆಯೂ ಸರ್ಕಾರ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಿದೆ. ಕಳೆದ ವರ್ಷದ ಪ್ರವಾಹದ ಹಾನಿಗೆ ಇನ್ನೂ ಪರಿಹಾರ ಕಾರ್ಯಗಳು ಪೂರ್ಣಗೊಂಡಿಲ್ಲ ಎಂಬ ಆರೋಪದ ನಡುವೆಯೇ ಸಿದ್ಧತೆ ಮಾಡುತ್ತಿರುವುದು ವಿಶೇಷ.

ಉತ್ತಮ ಮಳೆ ಮುನ್ಸೂಚನೆ: ಕಳೆದ ವರ್ಷ ಮುಂಗಾರಿನಲ್ಲಿ ವಾಡಿಕೆಗಿಂತ ಶೇ. 16 ಹಾಗೂ ಹಿಂಗಾರಿನಲ್ಲಿ ಶೇ. 85 ಅಧಿಕ ಮಳೆಯಾಗಿತ್ತು  ಈ ವರ್ಷವೂ ಉತ್ತಮ ಮಳೆಯಾಗುತ್ತದೆ ಎಂಬ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಯಾವ ಪ್ರಮಾಣದಲ್ಲಿ ಮಳೆ ಇರುತ್ತದೆ ಎಂಬ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಆದರೆ ಕಳೆದ ಬಾರಿಯಂತೆ ಉತ್ತಮ ಮಳೆ ಎಂಬ ಸೂಚನೆ ಇದೆ.

ಹಣ ಮೀಸಲು: ಈ ವರ್ಷ ಪ್ರವಾಹ ಬಂದರೆ ಕೊನೆಗಳಿಗೆಯಲ್ಲಿ ಪರದಾಡಬಾರದೆಂಬ ಕಾರಣಕ್ಕೆ ಹಣ ಮೀಸಲಿಡಲಾಗಿದೆ. ಕೇಂದ್ರ ಸರ್ಕಾರ ಕಳೆದ ವರ್ಷ ವಿಪತ್ತು ನಿರ್ವಹಣಾ ನಿಧಿಯಲ್ಲಿ 336 ಕೋಟಿ ರೂ.ಗಳನ್ನು ಮೀಸಲಿಟ್ಟಿತ್ತು. ಆದರೆ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ 1054 ಕೋಟಿ ರೂ.ಗಳು ಲಭ್ಯವಾಗಲಿದೆ. ಅದರಲ್ಲಿ ಶೇ. 20 ಹಣವನ್ನು ಅಂದರೆ 210 ಕೋಟಿ ರೂ.ಗಳು ರಾಜ್ಯದಲ್ಲಿ ಲಭ್ಯವಿದೆ.

ತಂಡಗಳು ಸಿದ್ಧಳ ಈಗಾಗಲೇ ಮಳೆ ಆರಂಭವಾಗಿರುವ ಕಾರಣಕ್ಕೆ ಧಾರವಾಡ, ಬೆಳಗಾವಿ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಎನ್​ಡಿಆರ್​ಎಫ್ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ರಾಜ್ಯ ವಿಪತ್ತು ಸ್ಪಂದನಾ ತಂಡ 200 ಸಿಬ್ಬಂದಿಯೊಂದಿಗೆ ಸಿದ್ಧವಿದೆ. ಇವರು ನಾಲ್ಕು ತಂಡಗಳಲ್ಲಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ. ಇವರಿಗೆಲ್ಲ ಅಗತ್ಯ ತರಬೇತಿ ನೀಡಲಾಗಿದೆ. ತುರ್ತು ಶೋಧನಾ ಮತ್ತು ರಕ್ಷಣಾ ಉಪಕರಣಗಳ ಖರೀದಿಗಾಗಿ 20.10 ಕೋಟಿ ರೂ.ಗಳನ್ನು ಈ ತಂಡಕ್ಕೆ ಬಿಡುಗಡೆ ಮಾಡಲಾಗಿದೆ.

ಹನ್ನೊಂದು ಇಲಾಖೆಗಳ ಸಮನ್ವಯ: ಕಂದಾಯ, ಆರೋಗ್ಯ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಆಹಾರ, ಅಗ್ನಿಶಾಮಕ, ಪೊಲೀಸ್ ಹೀಗೆ ಹನ್ನೊಂದು ಇಲಾಖೆಗಳನ್ನು ಸಮನ್ವಯದೊಂದಿಗೆ ರಾಜ್ಯ ಮಟ್ಟದಲ್ಲಿ ಯೋಜನೆಯೊಂದನ್ನು ಸಿದ್ಧಪಡಿಸುವ ಕಾರ್ಯ ಅಂತಿಮ ಹಂತದಲ್ಲಿದೆ ಎಂದು ಆಯುಕ್ತ ಮನೋಜ್ ರಾಜನ್ ವಿವರಿಸಿದರು.

ಸಮಿತಿಗಳ ರಚನೆ: ಗ್ರಾಮ ಮಟ್ಟದಲ್ಲಿ ಪ್ರವಾಹ ನಿಯಂತ್ರಣ ಹಾಗೂ ಪರಿಹಾರ ಕಾರ್ಯಗಳಿಗೆ ಸಂಬಂಧಿಸಿದಂತೆ ಆರು ಸಮಿತಿಗಳನ್ನು ರಚನೆ ಮಾಡಲು ನಿರ್ಧರಿಸಲಾಗಿದೆ. ಪಂಚಾಯಿತಿಗಳ ಅಧ್ಯಕ್ಷರು ಇಲ್ಲದ ಕಾರಣ ಆಡಳಿತಾಧಿಕಾರಿ ಹಾಗೂ ಅಧಿಕಾರಿಗಳು ಸ್ಥಳೀಯರೊಂದಿಗೆ ಸೇರಿ ರಚನೆ ಮಾಡಬೇಕಾಗಿದೆ.

1. ಮುನ್ನೆಚ್ಚರಿಕೆ ಮಾಹಿತಿ ಪ್ರಚಾರ ನೀಡುವ ತಂಡ

2. ಬಾಧಿತ ಜನರ ಸ್ಥಳಾಂತರ, ರಕ್ಷಣೆ ಹಾಗೂ ಶೋಧನೆ ತಂಡ

3. ಔಷಧ ಹಾಗೂ ಆರೋಗ್ಯ ಪೂರೈಕೆ ತಂಡ

4. ಆಶ್ರಯ ನಿರ್ವಹಣೆ ತಂಡ (ಕುಡಿಯುನ ನೀರು, ನೈರ್ಮಲ್ಯ, ಆರೋಗ್ಯ, ಪೋಷಣೆ, ಊಟ ಇತ್ಯಾದಿ ಜವಾಬ್ದಾರಿ)

5. ಜಾನುವಾರು ಸಂರಕ್ಷಣೆ ಮತ್ತು ಮೃತದೇಹ ವಿಲೇವಾರಿ ತಂಡ

6. ಹಾನಿಯ ಮೌಲ್ಯಮಾಪನ ತಂಡ

ಗ್ರಾಮವಾರು ಕ್ರಿಯಾ ಯೋಜನೆ: ಕಳೆದ ವರ್ಷದ ಪ್ರವಾಹದಿಂದ ಸಾವಿರಾರು ಹಳ್ಳಿಗಳಲ್ಲಿ ಸಮಸ್ಯೆಯಾಗಿದೆ. ಅದರಲ್ಲೂ 2000 ಗ್ರಾಮಗಳನ್ನೇ ಸ್ಥಳಾಂತರ ಮಾಡಬೇಕಿತ್ತಾದರೂ ಸದ್ಯಕ್ಕೆ ಕೈಬಿಡಲಾಗಿದೆ. ಈಗ ದೇಶದಲ್ಲಿಯೇ ಮೊದಲ ಬಾರಿಗೆ ಗ್ರಾಮವಾರು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ. ಸ್ಥಳೀಯರನ್ನು ಒಳಗೊಂಡಂತೆ ಗ್ರಾಮ ಪಂಚಾಯಿತಿ ವಿಪತ್ತು ನಿರ್ವಹಣೆ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ. ಪ್ರವಾಹ ಉಂಟಾದರೆ ಸ್ಥಳೀಯವಾಗಿ ಲಭ್ಯವಾಗುವ ಸಂಪನ್ಮೂಲವನ್ನು ಬಳಸಿ ಹೇಗೆ ತಡೆಗಟ್ಟಬೇಕು? ಎಲ್ಲೆಲ್ಲಿ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಬೇಕು? ಕೊಚ್ಚಿ ಹೋಗುವ ಪ್ರದೇಶಗಳಲ್ಲಿ ಸಾಧ್ಯವಾದರೆ ಶಾಶ್ವತ, ತುರ್ತು ತಡೆಗೋಡೆಗಳ ನಿರ್ಮಾಣ ಈ ಎಲ್ಲ ಕಾರ್ಯಗಳನ್ನು ಗ್ರಾಮವಾರು ಮಾಡಲಾಗುತ್ತದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ವಿವರಿಸಿದ್ದಾರೆ.

ಎಸ್​ಎಂಎಸ್ ಮಾಹಿತಿ: ಮಳೆಯ ಬಗ್ಗೆ ಎಸ್​ಎಂಎಸ್ ಮೂಲಕ ಮಾಹಿತಿ ರವಾನೆ ಮಾಡುವ ವ್ಯವಸ್ಥೆ ಹಿಂದೆಯೇ ಜಾರಿಗೆ ಬಂದಿದೆ. ಈಗಾಗಲೇ 22372 ಜನರ ಮೊಬೈಲ್ ಸಂಖ್ಯೆ ಲಭ್ಯವಿದೆ. ಕಾಲ್ ಸೆಂಟರ್ ಸಹ ಇದೆ. ದಿನಕ್ಕೆ 10 ಸಾವಿರ ಕರೆ ಸ್ವೀಕರಿಸುವ ಸಾಮರ್ಥ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net