

ಮೈಸೂರು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಮುಂದಾಗಿರುವ ಪ್ರವಾಸೋದ್ಯಮ ಇಲಾಖೆ ಇದೀಗ ಜಿಲ್ಲೆಯ ಪ್ರಮುಖವಾದ ಪ್ರವಾಸಿ ತಾಣದಲ್ಲಿ ಮಾಹಿತಿ ಫಲಕಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸಿ, ಮಾಹಿತಿ ಒದಗಿಸುವ ಉಪಕ್ರಮ ಶುರುಮಾಡಿದೆ.
ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರವಾಸಿಗರಿಗೆ ನಗರದ ಪ್ರಮುಖ ಪ್ರವಾಸಿ ತಾಣ ಹಾಗೂ ಐತಿಹಾಸಿಕ, ಪಾರಂಪರಿಕ ಕಟ್ಟಡಗಳ ಬಗ್ಗೆ ನೈಜ ಹಾಗೂ ಸಮಗ್ರ ಮಾಹಿತಿ ನೀಡುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯೂ ಮಾಹಿತಿ ಫಲಕಗಳಿಗೆ ಕ್ಯೂಆರ್ ಕೋಡ್ ಅಳವಡಿಸಿದೆ.
ಮೈಸೂರಿನ ಪ್ರಮುಖ ಪಾರಂಪರಿಕ ಕಟ್ಟಡಗಳು ಹಾಗೂ ಪ್ರವಾಸಿ ತಾಣ ಸೇರಿದಂತೆ ಪ್ರಮುಖ 39 ತಾಣವನ್ನು ಇಲಾಖೆ ಆಯ್ಕೆ ಮಾಡಿಕೊಂಡು, ಆ ಸ್ಥಳ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಕ್ಯೂಆರ್ ಕೋಡ್ ವ್ಯವಸ್ಥೆ ಮೂಲಕ ಆಯಾ ಸ್ಥಳ ಹಾಗೂ ಕಟ್ಟಡದ ಬಗ್ಗೆ ಮಾಹಿತಿ ಒದಗಿಸುತ್ತಿದೆ.
ಮೈಸೂರಿನ ಹೃದಯ ಭಾಗದಲ್ಲಿ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ ಇದೆ. ಸ್ವಲ್ಪ ದೂರ ಕ್ರಮಿಸಿದರೇ ಜಗತ್ಪ್ರಸಿದ್ಧ ಮೃಗಾಲಯವೂ ಇದೆ. ಇಲ್ಲಿ ಬಹಳ ಹಿಂದಿನಿಂದಲೂ ಸ್ಥಳದ ಬಗ್ಗೆ ಕಿರುಮಾಹಿತಿಯನ್ನು ಒಳಗೊಂಡ ಫಲಕಗಳನ್ನು ಅಳವಡಿಸಲಾಗಿದೆ. ಆದರೆ ಈಗ ಬರುವ ಪ್ರವಾಸಿಗರು ಗುಂಪು-ಗುಂಪಾಗಿ ಇದ್ದ ಸಂದರ್ಭದಲ್ಲಿ ಮಾಹಿತಿಯನ್ನು ಓದಿ ತಿಳಿದುಕೊಳ್ಳುವಷ್ಟು ವ್ಯವಧಾನ ಇರುವುದಿಲ್ಲ. ಅವರಿಗೆ ಅರಮನೆ ನೋಡಬೇಕು ಎನ್ನುವ ಧಾವಂತ ಇರುತ್ತದೆ. ಹೀಗಾಗಿ ಅಂತಹ ಮಾಹಿತಿ ಫಲಕದಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗಿದೆ. ಎಲ್ಲವನ್ನೂ ಫೋಟೋ ತೆಗೆಯುವ ರೀತಿಯಲ್ಲೇ ಇದನ್ನು ಸ್ಕ್ಯಾನ್ ಮಾಡಿದರೇ ಸಾಕು ಪೂರ್ಣ ಮಾಹಿತಿ ದೊರೆಯುತ್ತದೆ. ಜತೆಗೆ ನಿಗದಿತ ಸ್ಥಳದ ಇನ್ನು ಹೆಚ್ಚಿನ ಮಾಹಿತಿಗಳು, ಪತ್ರಿಕೆಯಲ್ಲಿ ಬಂದಿರುವ ವರದಿಗಳು ಲಿಂಕ್‌ನಲ್ಲಿ ಸಿಗುತ್ತವೆ. ಹೀಗಾಗಿ ಪ್ರವಾಸಿಗರು ಗೂಗಲ್ ಜಾಲಾಡುವ ಪ್ರಮಯೇವೇ ಬರುವುದಿಲ್ಲ.
ಐತಿಹಾಸಿಕ ಕಟ್ಟಡಗಳು, ದೇವಾಲಯಗಳು, ಉದ್ಯಾನವನ, ಇತರ ಪ್ರೇಕ್ಷಣೀಯ ಸ್ಥಳಗಳ ಬಳಿ ಮಾಹಿತಿ ಫಲಕದೊಂದಿಗೆ ಕ್ಯೂಆರ್ ಕೋಡ್ ಮುದ್ರಿತ ಫಲಕ ಅಳವಡಿಸಲಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಆಯಾ ಸ್ಥಳದ ಸಂಕ್ಷಿಪ್ತ ಮಾಹಿತಿಯನ್ನು ಫಲಕದಲ್ಲಿ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಕ್ಯೂಆರ್‌ಕೋಡ್ ಸ್ಕ್ಯಾನ್ ಮಾಡುವಂತೆ ಸೂಚನೆ ನೀಡಲಾಗಿದೆ. ಪ್ರವಾಸಿಗರು ತಮ್ಮ ಮೊಬೈಲ್ ಫೋನಿನಲ್ಲಿ ಈ ಕ್ಯೂಆರ್‌ಕೋಡ್ ಸ್ಕ್ಯಾನ್ ಮಾಡಿದರೆ ಆ ಸ್ಥಳದ ಇತಿಹಾಸ, ವಾಸ್ತುಶಿಲ್ಪ, ಸ್ಥಳ ಮಹತ್ವ ಇತರ ವಿಶೇಷ ಮಾಹಿತಿ ತಿಳಿಯುತ್ತದೆ.