

ಯೋಗಾಭ್ಯಾಸ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ನಗರದ ಚಾಮುಂಡಿಬೆಟ್ಟ ಆವರಣದಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಯೋಗ ದಸರಾ ಉಪ ಸಮಿತಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಯೋಗ ಚಾರಣ ಮತ್ತು ಯೋಗ ನಮಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಜನಿಸಿದ ಯೋಗವು ಪ್ರಧಾನಿಮಂತ್ರಿ ನರೇಂದ್ರ ಮೋದಿ ಅವರಿಂದ ವಿಶ್ವ ಮನ್ನಣೆ ಪಡೆದುಕೊಂಡಿದೆ. ಯೋಗ ಮಾಡುವುದರಿಂದ ರಕ್ತ ಪರಿಚಲನವಾಗಿ, ಮನಸ್ಸು ಮತ್ತು ದೇಹ ಆರೋಗ್ಯದಿಂದಿರಲು ಸಹಕಾರಿಯಾಗುತ್ತದೆ ಎಂದರು.
ಯೋಗದ ಮೂಲಕ ಧ್ಯಾನ ಮತ್ತು ಉಪಾಸನೆ ಮಾಡುವುದರಿಂದ ಮಾನವೀಯ ಮೌಲ್ಯಗಳು, ಧಾರ್ಮಿಕ ಆಚರಣೆ, ಶಿಸ್ತು, ಶಾಂತಿ ಹಾಗೂ ನೆಮ್ಮದಿ ಕಂಡುಕೊಳ್ಳಬಹುದು. ಹಾಗಾಗಿ ಪ್ರತಿಯೊಬ್ಬರೂ ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡರೆ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ ಎಂದರು.
500ಕ್ಕೂ ಅಧಿಕ ಯೋಗಪಟುಗಳು ಭಾಗಿ
ಯೋಗ ದಸರಾ ಉಪ ಸಮಿತಿಯು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಮೈಸೂರಿನ ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಯೋಗ ಚಾರಣ ಮತ್ತು ದುರ್ಗಾ ನಮಸ್ಕಾರದಲ್ಲಿ ಬೆಳಗ್ಗೆ 6 ಗಂಟೆಗೆ ಚಾಮುಂಡಿ ಬೆಟ್ಟದ ಮೆಟ್ಟಿಲು ಹತ್ತಿಕೊಂಡು, ಚಾಮುಂಡಿ ಬೆಟ್ಟದ ಮೇಲಿನ ಆವರಣ ತಲುಪಿ, ವಜ್ರಾಸನ, ವೀರಾಸನ, ವೀರಭದ್ರ ಆಸನ ಹಾಗೂ ಸಿಂಹ ಘರ್ಜನೆ ಸೇರಿಂದಂತೆ ಹಲವು ಭಂಗಿಯ ಯೋಗಾ ಆಸನಗಳನ್ನು ಮಾಡುವುದರ ಜತೆಗೆ 5 ಸುತ್ತು ದುರ್ಗಾ ನಮಸ್ಕಾರ ಮಾಡಿದರು.
ಪತಂಜಲಿ ಯೋಗ ಶಿಕ್ಷಣ ಸಮಿತಿ ಯೋಗಪಟುಗಳು, ಯೋಗಾಸಕ್ತರು ಸೇರಿದಂತೆ 500ಕ್ಕೂ ಅಧಿಕ ಯೋಗಪಟುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವಿಧಾನಪರಿಷತ್ ಸದಸ್ಯ ಜವರಾಯಿಗೌಡ, ಯೋಗ ದಸರಾ ಉಸ ಸಮಿತಿ ಅಧ್ಯಕ್ಷ ಎನ್.ಆರ್.ನಾಗೇಶ್, ಪದನಿಮಿತ್ತ ಭೂ ದಾಖಲೆಗಳ ಉಪ ನಿರ್ದೇಶಕಿ ಹಾಗೂ ಯೋಗ ದಸರಾ ಉಪ ಸಮಿತಿ ಉಪ ವಿಶೇಷಾಧಿಕಾರಿ ಕೆ.ರಮ್ಯಾ, ಶಿಕ್ಷಣಾಧಿಕಾರಿ ಹಾಗೂ ಕಾರ್ಯಾಧ್ಯಕ್ಷ ನಿರೂಪ್ ವೆಸ್ಲಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ, ಯೋಗ ದಸರಾ ಸಮಿತಿ ಸಹ ಕಾರ್ಯಾಧ್ಯಕ್ಷೆ ಕೆ. ಶಿಲ್ಪಾ, ಜಿಲಾ ಆಯುಷ್ ಅಧಿಕಾರಿ ಹಾಗೂ ಯೋಗ ದಸರಾ ಉಸಮಿತಿ ಕಾರ್ಯದರ್ಶಿ ಡಾ.ರೇಣುಕಾದೇವಿ ಇತರರಿದ್ದರು.