

ಬೆಂಗಳೂರು: ನಗರದಲ್ಲಿ ಪ್ರತ್ಯೇಕವಾಗಿ ಮೂರು ಕೊಲೆ ಪ್ರಕರಣಗಳು ನಡೆದಿದ್ದು, ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ.
ತಾಯಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಗಾರೆ ಕೆಲಸಗಾರರನನ್ನು ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಭೀಕರವಾಗಿ ಹತ್ಯೆಗೈದಿರುವ ಘಟನೆ ಕೆ.ಸಿ.ಜನರಲ್ ಆಸ್ಪತ್ರೆ ಆವರಣದಲ್ಲಿ ನಡೆದಿದೆ.
ವಲ್ಲಿಪುರ ನಿವಾಸಿ ಪನ್ನೀರ್ ಸೆಲ್ವಂ(೩೬) ಕೊಲೆಯಾದವ. ಕೃತ್ಯ ಎಸಗಿದ ಪ್ರೇಮ್ ಕುಮಾರ್(೨೧) ಮತ್ತು ಮದನ್(೨೩) ಎಂಬುವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾರೆ ಕೆಲಸ ಮಾಡಿಕೊಂಡಿದ್ದ ಪನ್ನೀರ್ ಸೆಲ್ವಂ ಪತ್ನಿ ಮಕ್ಕಳ ಜತೆ ವಲ್ಲಿಪುರನಲ್ಲಿ ವಾಸವಾಗಿದ್ದು, ವಿಪರೀತ ಮದ್ಯ ವ್ಯಸನಿಯಾಗಿದ್ದ ಈತ, ಪ್ರತಿನಿತ್ಯ ಸಂಜೆ ಮದ್ಯದ ಅಮಲಿನಲ್ಲಿ ಅಕ್ಕ-ಪಕ್ಕದ ನಿವಾಸಿಗಳಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದ. ಈ ಮಧ್ಯೆ ಭಾನುವಾರ ಬೆಳಗ್ಗೆ ಪನ್ನೀರ್ ಸೆಲ್ವಂ ಮದ್ಯದ ನಶೆಯಲ್ಲಿ ಪ್ರೇಮ್‌ಕುಮಾರ್ ತಾಯಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಅದೇ ವಿಚಾರವಾಗಿ ಪನ್ನೀರ್ ಸೆಲ್ವಂ ಹಾಗೂ ಆರೋಪಿಗಳ ನಡುವೆ ಮಾರಾಮಾರಿ ನಡೆದಿದೆ. ಬಳಿಕ ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದ್ದಾರೆ. ಆ ಬಳಿಕ ಮಧ್ಯಾಹ್ನವೂ ಇಬ್ಬರ ನಡುವೆ ಗಲಾಟೆಯಾಗಿದೆ. ಆರೋಪಿಗಳು ಗಾರೆ ಕೆಲಸ ಮಾಡಿಕೊಂಡಿದ್ದರು.
ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಹತ್ಯೆ
ಘಟನೆಯಿಂದ ಆಕ್ರೋಶಗೊಂಡಿದ್ದ ಆರೋಪಿಗಳು ಸಂಜೆ ೪ ಗಂಟೆ ಸುಮಾರಿಗೆ ಪನ್ನೀರ್ ಸೆಲ್ವಂಗೆ ಕರೆ ಮಾಡಿ, ಕೆ.ಸಿ.ಜನರಲ್ ಆಸ್ಪತ್ರೆ ಆವರಣದ ಹಿಂಭಾಗದಲ್ಲಿರುವ ಪಾರ್ಕ್‌ಗೆ ಬರುವಂತೆ ಹೇಳಿದ್ದಾರೆ. ಅದರಂತೆ ಪನ್ನೀರ್ ಸೆಲ್ವಂ ಪಾರ್ಕ್ ಬಂದಾಗ, ಬೆಳಗ್ಗೆ ನಡೆದ ಗಲಾಟೆ ಬಗ್ಗೆ ಪ್ರಸ್ತಾಪಿಸಿ ವಾಗ್ವಾದ ನಡೆಸಿದ್ದಾರೆ. ಅದು ವಿಕೋಪಕ್ಕೆ ಹೋದಾಗ ಆಕ್ರೋಶಗೊಂಡ ಆರೋಪಿಗಳು ಅಲ್ಲೆ ಇದ್ದ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಪನ್ನೀರ್ ಸೆಲ್ವಂನನ್ನು ಹತ್ಯೆಗೈದು ಪರಾರಿಯಾಗಿದ್ದರು. ಮುಖದ ಮೇಲೆ ಕಲ್ಲು ಎತ್ತಿಹಾಕಿದ್ದರಿಂದ ಆರಂಭದಲ್ಲಿ ಮೃತನ ಗುರುತು ಪತ್ತೆಯಾಗಿರಲಿಲ್ಲ. ಬಳಿಕ ತಾಂತ್ರಿಕ ಹಾಗೂ ಬಾತ್ಮೀದಾರರ ಮಾಹಿತಿ ಮೇರೆಗೆ ಕೊಲೆಯಾದವ ಪನ್ನೀರ್ ಸೆಲ್ವಂ ಎಂಬುದು ಗೊತ್ತಾಗಿತ್ತು. ಬಳಿಕ ತನಿಖೆ ನಡೆಸಿದಾಗ ಆರೋಪಿಗಳ ಕೃತ್ಯ ಗೊತ್ತಾಗಿ ಇಬ್ಬರನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ತಾಯಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದಕ್ಕೆ ಹತ್ಯೆಗೈದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಗಂಗಮ್ಮನಗುಡಿ
ಮರಕೆಲಸ ಮಾಡುತ್ತಿದ್ದ ಯುವಕನಿಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಹತ್ಯೆಗೈದಿರುವ ಘಟನೆ ನಡೆದಿದೆ.
ಅಬ್ಬಿಗೆರೆ ನಿವಾಸಿ ಮಂಜುನಾಥ್(೧೭) ಕೊಲೆಯಾದ ಯುವಕ. ಘಟನೆಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ಹಳೇ ದ್ವೇಷ ಅಥವಾ ಪ್ರೀತಿಯ ವಿಚಾರಕ್ಕೆ ಕೃತ್ಯ ನಡೆದಿರುವ ಸಾಧ್ಯೆತೆಯಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಲೆಯಾದ ಮಂಜುನಾಥ್‌ಗೆ ಅಪ್ಪ-ಅಮ್ಮ ಇಲ್ಲ. ಹೀಗಾಗಿ ಅಬ್ಬಿಗೆರೆಯ ಚಿಕ್ಕಪ್ಪನ ಮನೆಯಲ್ಲಿ ವಾಸವಾಗಿದ್ದ. ಎಸ್‌ಎಸ್‌ಎಲ್‌ಸಿ ಅನುತ್ತೀರ್ಣಗೊಂಡಿದ್ದು, ವ್ಯಾಸಂಗವನ್ನು ಅರ್ಧಕ್ಕೆ ಮೊಟಕುಗೊಳಿಸಿಕೊಂಡಿದ್ದ. ಹೀಗಾಗಿ ಚಿಕ್ಕಪ್ಪನ ಜತೆಗೆ ಮರ ಕೆಲಸಕ್ಕೆ ಹೋಗುತ್ತಿದ್ದ. ಕೆಲ ದಿನಗಳ ಹಿಂದೆ ಮದ್ಯ ಸೇವಿಸಿದ್ದ ಎಂಬ ಕಾರಣಕ್ಕೆ ಚಿಕ್ಕಪ್ಪ ಆತನಿಗೆ ಹೊಡೆದು ಬುದ್ದಿ ಹೇಳಿದ್ದರು.
ಈ ನಡುವೆ ಭಾನುವಾರ ನಸುಕಿನ ೨.೩೦ರ ಸುಮಾರಿಗೆ ಮನೆಯಿಂದ ಹೊರಗಡೆ ಬಂದ ಮಂಜುನಾಥ್, ವೈಮ್ಯಾಕ್ಸ್ ಸರ್ಕಲ್ ಬಳಿ ನಡೆಯುತ್ತಿದ್ದ ನಾಟಕ ನೋಡಲು ಹೋಗಿದ್ದಾನೆ. ಆ ನಂತರ ನಾಟಕ ಮುಗಿಸಿಕೊಂಡು ವಾಪಸ್ ಬರುವಾಗ ಕ್ಷುಲ್ಲಕ ವಿಚಾರಕ್ಕೆ ಸ್ಥಳೀಯ ಯುವಕರ ಜತೆ ಜಗಳ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಇದೇ ವಿಚಾರಕ್ಕೆ ಕೃತ್ಯ ನಡೆದಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಮತ್ತೊಂದೆಡೆ ಮಗ ಮನೆಯಲ್ಲಿ ಕಾಣದಕ್ಕೆ ಗಾಬರಿಗೊಂಡ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಆದರೆ, ಎಲ್ಲಿಯೂ ಪತ್ತೆಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು.
ಜ್ಞಾನಭಾರತಿ:
ಮನೆ ಬಾಡಿಗೆ ಕಟ್ಟುವ ವಿಚಾರಕ್ಕೆ ಸಾಕುಮಗನೊಂದಿಗೆ ತಂದೆ ಜಗಳವಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಜ್ಞಾನಭಾರತಿಯಲ್ಲಿ ನಡೆದಿದೆ.
ಜ್ಞಾನಭಾರತಿಯ ದೊಡ್ಡಗೊಲ್ಲರಹಟ್ಟಿ ನಿವಾಸಿ ಪೇಂಟಿಂಗ್ ವೃತ್ತಿ ಮಾಡುತ್ತಿದ್ದ ಆನಂದ್ (೩೭) ಕೊಲೆಯಾದ ದುರ್ದೈವಿ.
ದಿನಾ ಕುಡಿದು ಬರುತ್ತಿದ್ದ ತಂದೆ ಪುಟ್ಟಸ್ವಾಮಿ(೭೦) ಕೌಟುಂಬಿಕ ವಿಚಾರಕ್ಕೆ ಸಾಕು ಮಗ ಆನಂದ್ ಜತೆ ಆಗಾಗ್ಗೆ ಜಗಳ ಮಾಡುತ್ತಿದ್ದರು. ಭಾನುವಾರ ರಾತ್ರಿ ೧೦.೨೦ರ ಸುಮಾರಿನಲ್ಲಿ ಮನೆಯ ಬಾಡಿಗೆ ಕಟ್ಟುವ ವಿಚಾರಕ್ಕೆ ಅಪ್ಪ ಮಗನ ನಡುವೆ ಜಗಳವಾಗಿದೆ. ಈ ಜಗಳ ವಿಕೋಪಕ್ಕೆ ತಿರುಗಿ ಅಡುಗೆ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ತಂದೆ ಪುಟ್ಟಸ್ವಾಮಿ ಮಗನ ಎದೆಗೆ ಮತ್ತು ಹೊಟ್ಟೆಗೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಆನಂದ್ ಕುಸಿದುಬಿದ್ದಿದ್ದಾರೆ. ನೆರೆಹೊರೆಯವರು ಇವರ ಮನೆಯಿಂದ ಕೂಗಾಟ, ಕಿರುಚಾಟ ಕೇಳಿ ಮನೆ ಬಳಿ ಬಂದು ನೋಡಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆನಂದ್‌ನನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಞಾನಭಾರತಿ ಠಾಣೆ ಪೊಲೀಸರು ಪುಟ್ಟಸ್ವಾಮಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.