

2025-26ನೇ ಸಾಲಿನಲ್ಲಿ ಮೈಸೂರು ಜಿಲ್ಲೆಯಲ್ಲಿನ ಪ್ರತಿಷ್ಠಿತ ಶಾಲೆಗಳಲ್ಲಿ ಪರಿಶಿಷ್ಟ ಜಾತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 6 ನೇ ತರಗತಿಗೆ ಪ್ರವೇಶ ಕಲ್ಪಿಸುವ ಸಂಬoಧ ಅರ್ಹ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸ್ತಕ ವಿದ್ಯಾರ್ಥಿಗಳು ಏಪ್ರಿಲ್ 15 ರಿಂದ ಮೇ 03 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಆನ್‌ಲೈನ್ https://swdservices.karnataka.gov.in/EducationPrestigiousಮೂಲಕ ಅರ್ಜಿಗಳನ್ನು ನೋಂದಾಯಿಸಲು ಅವಕಾಶವಿದ್ದು, ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ನೋಂದಾಯಿಸಿದ ನಂತರ ದಾಖಲಾತಿಗಳನ್ನು ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಮೈಸೂರು ಜಿಲ್ಲೆ ಮೈಸೂರು ಕಛೇರಿಗೆ ಮೇ 05 ರೊಳಗೆ ಸಲ್ಲಿಸಬಹುದಾಗಿದೆ.
ಈ ಕೆಳಕಂಡoತೆ ಹಿಂದುಳಿದ ವರ್ಗದವರಿಗೆ ಮೊದಲನೇ ಆದ್ಯತೆ ನೀಡಲಾಗುವುದು. ಪೌರಕಾರ್ಮಿಕರ ಮಕ್ಕಳು, ಸಫಾಯಿ ಕರ್ಮಚಾರಿಗಳವರ ಮಕ್ಕಳು,ಸ್ಮಶಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಮಕ್ಕಳು, ದೇವದಾಸಿಯರ ಮಕ್ಕಳು, ಅಂಗವಿಕಲತೆಯನ್ನು ಹೊಂದಿರುವವರು, ಕೋವಿಡ್-19 ಮುಂತಾದ ಪ್ರಕೃತಿ ವಿಕೋಪದಿಂದ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳು, ಸಿಂಗಲ್ ಫ್ಯಾಮಿಲಿ ಮಕ್ಕಳು,ಯೋಜನಾ ನಿರಾಶ್ರಿತರ ಮಕ್ಕಳು, ಮಾಜಿ ಸೈನಿಕರ ಮಕ್ಕಳು, ಕೊಳೆಗೇರಿಗಳಲ್ಲಿ ವಾಸಿಸುತ್ತಿರುವ ಮಕ್ಕಳು, ಕೃಷಿ ಕಾರ್ಮಿಕರ ಮಕ್ಕಳು, ಸಾಲಭಾದೆಯಿಂದ ಆತ್ಮಹತ್ಯೆಗೆ ಗುರಿಯಾದವರ ಮಕ್ಕಳು,ದೌರ್ಜನ್ಯದಲ್ಲಿ ನೊಂದವರ ಮಕ್ಕಳು, ಜೀತ ವಿಮುಕ್ತ ಮಕ್ಕಳಿಗೆ ಮೊದಲನೇ ಆದ್ಯತೆ ನೀಡಲಾಗುವುದರಿಂದ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವವರು ಸಂಬoಧಪಟ್ಟ ದಾಖಲಾತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸತಕ್ಕದ್ದು.
ಆಯ್ಕೆಯಾದ ಅಭ್ಯರ್ಥಿಗಳನ್ನು ಭಾರತೀಯ ವಿದ್ಯಾಭವನ. ವಿಜಯನಗರ, ಮೈಸೂರು, ಗುಡ್ಸ್ಫರ್ಡ್ ಕಾನ್ವೆಂಟ್ ಲಷ್ಕರ್ ಮೊಹಲ್ಲಾ, ಮೈಸೂರು, ಶಾಸ್ತ್ರೀ ಚಾರಿಟಬಲ್ ಟ್ರಸ್ಟ್ ಬಿ.ಎಂ.ಬೈಪಾಸ್ ರೋಡ್, ಹುಣಸೂರು, ಮೈಸೂರು ಜಿಲ್ಲೆ, ಸೆಂಟ್ ಜೋಸೆಫ್ ಹುಣಸೂರು, ಕ್ರೈಸ್ಟ್ ಸ್ಕೂಲ್, ತಾಂಡವಪುರ, ನಂಜನಗೂಡು, ಶ್ರೀ ಜಗದ್ಗುರು ಬಾಲ ಗಂಗಾಧರನಾಥ ಸ್ವಾಮಿ ಬಾಲಜಗತ್, ಚುಂಚನಕಟ್ಟೆ. ಕೆ.ಆರ್. ನಗರ ತಾಲ್ಲೂಕು, ಎಸ್.ವಿ.ಇ.ಐ., ವಿಜಯನಗರ 4ನೇ ಹಂತ ಬೆಳವಾಡಿ, ಮೈಸೂರು ಈ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ ಕಲ್ಪಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.