

ಪ್ರತಿಭೆಯಿಂದ ಉನ್ನತ ಸ್ಥಾನಮಾನ, ಭವಿಷ್ಯವನ್ನು ರೂಪಿಸಿಕೊಂಡು ಯುವಜನತೆ ದೇಶ ಮತ್ತು ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಪಿ.ಶಿವರಾಜ್ ಸಲಹೆ ನೀಡಿದರು.
ನಗರದ ಎಂಎಂಕೆ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ 2025-26ನೇ ಸಾಲಿನ ಅಭಿಜ್ಞಾನ್ ಅಂತರ ಕಾಲೇಜು ಪ್ರತಿಭಾ ಉತ್ಸವ ಉದ್ಘಾಟಿಸಿ ಮಾತನಾಡಿದರು. ಸ್ಪರ್ಧಾತ್ಮಕ ಯುಗದಲ್ಲಿ ಇಂದು ತಾಂತ್ರಿಕ ಸವಲತ್ತುಗಳಿದ್ದರೂ ಸವಾಲುಗಳು ಹೆಚ್ಚಿದ್ದು, ಸಾಧನೆಗೆ ಸ್ವ ಪ್ರಯತ್ನ ಮುಖ್ಯವಾಗುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ದಾನ ಮತ್ತು ಸಾಮಾಜಿಕ ಅಭಿವೃದ್ಧಿಯ ಕೆಲಸ ಕಾರ್ಯಗಳು ಮಾದರಿಯಾಗಿದ್ದು, ಶ್ರೀ ಹೆಗಡೆ ಅವರ ಆಶೀರ್ವಾದದಿಂದ ಮೈಸೂರಿನ ಮಹಿಳಾ ಕಾಲೇಜು ಈ ಉತ್ಸವದ ಆಯೋಜನೆ ಮಾಡುತ್ತಿರುವುದು ಮಾದರಿಯಾಗಿದೆ ಎಂದರು.
ಮಕ್ಕಳ ಪ್ರತಿಭೆಗಳಿಗೆ ಸೂಕ್ತ ವೇದಿಕೆಗಳನ್ನು ಕಲ್ಪಿಸುವುದರೊಂದಿಗೆ ಸಾಂಸ್ಕೃತಿಕ ಅಭಿವ್ಯಕ್ತಿಯನ್ನು ಪೋಷಿಸುವುದು ಸಂಸ್ಥೆಯ ಕರ್ತವ್ಯ. ಪ್ರಕೃತಿಯಲ್ಲಿ ಹೆಣ್ಣು ಮತ್ತು ಗಂಡು ಸಮಾನರು. ಪುರುಷ ನೀರಿನಂತೆ, ಮಹಿಳೆ ಅಮೃತದಂತೆ ನಾನಾ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಾಳೆ ಎಂದರು.
ಮುಖ್ಯ ಅತಿಥಿ ನಯನಕುಮಾರಿ ಮಾತನಾಡಿ, ಪ್ರತಿಭೆ ಅನಾವರಣ ಮಾಡಲು ಇಂತಹ ವೇದಿಕೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕೌಶಲ ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲೆ ಪ್ರೊ.ಎನ್.ಭಾರತಿ ಮಾತನಾಡಿ, ನಂಬಿಕೆ ಮತ್ತು ಸ್ಪಷ್ಟ ಗುರಿಯೊಂದಿಗೆ ಇಂದಿನ ಯುವ ಸಮೂಹ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಭವಿಷ್ಯ ಕಟ್ಟಿಕೊಳ್ಳಲು ಮುಂದಾಗಬೇಕು. ಅಲ್ಲದೇ ಜ್ಞಾನ, ಅರಿವು ಹಾಗೂ ವಿವೇಕವನ್ನು ಸರ್ವ ರೀತಿಯಲ್ಲೂ ಬಳಸಿಕೊಂಡು ಜೀವನದಲ್ಲಿ ಮೇಲೆ ಬರಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಜ್ಯೋತಿ ಲಕ್ಷ್ಮೀ, ಐಕ್ಯುಎಸಿ ಸಂಚಾಲಕಿ ಕೆ.ಸುಕೃತಾ, ವಿದ್ಯಾರ್ಥಿನಿ ಸಂಘದ ಅಧ್ಯಕ್ಷೆ ಗಂಗಾಶ್ರೀ, ಉಪಾಧ್ಯಕ್ಷೆ ಶ್ರೇಯಾ ಶ್ರೀರಾಮ್ ಇತರರಿದ್ದರು.