ಪ್ರತಿಭಟನಾ ಸಭೆಯಲ್ಲಿ ಕಾರ್ಯಕರ್ತರ ಘೋಷಣೆ, ನಾಯಕರಿಗೆ ಇರಿಸುಮುರಿಸು

bjp
Published on

ಶಿವಮೊಗ್ಗ: ಬೆಳ್ಳಾರೆಯ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಶುಕ್ರವಾರ ಗೋಪಿ ವೃತ್ತದಲ್ಲಿ ವಿಶ್ವ ಹಿಂದೂ ಪರಿಷದ್ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನಾಯಕರ ಸಮ್ಮುಖದಲ್ಲೇ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲೂ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಮಾದರಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿತು. ಎಷ್ಟೇ ಸಮಾಧಾನ ಮಾಡಲು ಯತ್ನಿಸಿದರೂ ಕಾರ್ಯಕರ್ತರ ಆಕ್ರೋಶ ತಣ್ಣಗಾಗಲೇ ಇಲ್ಲ. ಇದರಿಂದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಕೆ.ಎಸ್.ಈಶ್ವರಪ್ಪ, ಆರ್‌ಎಸ್‌ಎಸ್ ಪ್ರಮುಖ ಪಟ್ಟಾಭಿರಾಮ ಸೇರಿದಂತೆ ಹಲವರಿಗೆ ಇರಿಸುಮುರಿಸು ತಂದಿತು.

ಕಾರ್ಯಕರ್ತರು ಯೋಗಿ, ಯೋಗಿ ಎಂದು ಘೋಷಣೆ ಕೂಗುತ್ತಿದ್ದರೆ ಇತ್ತ ಒಬ್ಬೊಬ್ಬರಾಗಿಯೇ ವೇದಿಕೆಯಿಂದ ಇಳಿದ ನಾಯಕರು ಕಾರು ಏರಿ ಜಾಗ ಖಾಲಿ ಮಾಡಿದರು. ಕೊನೆಗೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎನ್.ಚನ್ನಬಸಪ್ಪ ಅವರನ್ನು ಸುತ್ತುವರಿದ ಕಾರ್ಯಕರ್ತರು, ನಾವು ಕಲ್ಲು ಹೊಡೆಯುತ್ತಿಲ್ಲ. ಹಿಂದು ಕಾರ್ಯಕರ್ತನನ್ನು ಕಳೆದುಕೊಂಡ ನೋವು ನಮ್ಮನ್ನು ಕಾಡುತ್ತಿದೆ. ಕೊಲೆ ಮಾಡಿದವರು ಕೆಲವೇ ದಿನಗಳಲ್ಲಿ ರಾಜಾರೋಷವಾಗಿ ಓಡಾಡಿಕೊಂಡು ಇರುತ್ತಾರೆ. ಹಾಗೆ ಆಗಬಾರದು. ಕೊಲೆಗಾರರಿಗೆ ತಕ್ಷಣವೇ ಶಿಕ್ಷೆ ವಿಧಿಸಬೇಕು. ಯುಪಿ ಮಾದರಿ ಇಲ್ಲಿಯೂ ಬಿಗಿ ಕ್ರಮಕೈಗೊಳ್ಳಬೇಕು ಎಂದು ಪಟ್ಟುಹಿಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net