

ಚಿತ್ರದುರ್ಗ: ಜಿಲ್ಲೆಯಲ್ಲಿ ಪಿಎಂ ವಿಶ್ವಕರ್ಮ ಯೋಜನೆಯಡಿ ವಾರದಲ್ಲಿ ಕನಿಷ್ಠ 10 ಸಾವಿರ ಫಲಾನುಭವಿಗಳ ನೋಂದಣಿಗೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಸೂಚಿಸಿದರು.
ಡಿಸಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಯೋಜನೆ ಕುರಿತ ಜಿಲ್ಲಾ ಸಮಿತಿ ಸಭೆಯಲ್ಲಿ ಮಾತನಾಡಿ, ಸಾಮಾನ್ಯ ಸೇವಾ ಕೇಂದ್ರದಲ್ಲಿ ಅರ್ಜಿ ನೋಂದಣಿ ಉಚಿತವಿದೆ. ಇದಕ್ಕೆ ಹಣ ಪಡೆದರೆ ಅಂಥ ಸೇವಾ ಕೇಂದ್ರಗಳ ವಿರುದ್ಧ ಎಫ್‌ಐಆರ್ ದಾಖಲಿಸಿ, ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಸಿದರು.
ಬಡಗಿ, ದೋಣಿ, ಶಸ್ತ್ರ, ಕಮ್ಮಾರಿಕೆ, ಕಲ್ಲುಕುಟಿಗ, ಬಟ್ಟೆ, ಚಾಪೆ-ಕಸಪೊರಕೆ, ಗೊಂಬೆ ಮತ್ತು ಆಟಿಕೆ ತಯಾರಕರು, ಕ್ಷೌರಿಕ ವೃತ್ತಿ, ಸುತ್ತಿಗೆ ಮತ್ತು ಉಪಕರಣಗಳು, ಹೂಮಾಲೆ ತಯಾರಕರು, ಮಡಿವಾಳರು (ದೋಬಿ), ಆಭರಣ ತಯಾರಿಕೆ, ಟೈಲರಿಂಗ್, ಕುಂಬಾರಿಕೆ, ಮೀನುಬಲೆ ಹೆಣೆಯುವವರು, ಮೂರ್ತಿ ಮತ್ತು ಕಲ್ಲಿನ ಕೆತ್ತನೆ ಮಾಡುವ ಶಿಲ್ಪಿಗಳು, ಚಮ್ಮಾರರು, ಪಾದರಕ್ಷೆ ತಯಾರಕರು, ಬೀಗ ತಯಾರಿಕೆ ಸೇರಿ ವಿವಿಧ ವೃತ್ತಿ ಆಧಾರಿತ ಕುಶಲಕರ್ಮಿಗಳು, ಅಸಂಘಟಿತ ಕಾರ್ಮಿಕರೂ ಸೇರಿ ನಾನಾ ವೃತ್ತಿಗಳಲ್ಲಿರುವ ಶ್ರಮಿಕರಿಗೆ ಯೋಜನೆ ನೆರವಾಗಲಿದೆ ಎಂದರು.
ಇವರು ತಮ್ಮ ವೃತ್ತಿ ಸುಧಾರಣೆಗೆ ಅಗತ್ಯವಿರುವ ಉಪಕರಣಗಳ ಖರೀದಿಗಾಗಿ ಆರ್ಥಿಕ ಸಹಾಯ ಸಿಗಲಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಆರ್ಥಿಕವಾಗಿ ಹಿಂದುಳಿದ ಹೆಚ್ಚಿನ ಜನರು ನಮ್ಮ ಜಿಲ್ಲೆಯಲ್ಲಿದ್ದು, ಅವರಿಗೆ ಈ ಯೋಜನೆ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಳೆದ ಸೆಪ್ಟೆಂಬರ್ 17ರಿಂದ ನೋಂದಣಿ ಪ್ರಾರಂಭವಾಗಿದ್ದರೂ ಜಿಲ್ಲೆಯಲ್ಲಿ ಹಿನ್ನಡೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಡಿಸಿ, ಸರ್ವರ್, ಇಂಟರ್‌ನೆಟ್ ಹಾಗೂ ವಿದ್ಯುತ್ ತೊಂದರೆ ಇದೆ ಎಂಬ ಸೇವಾ ಕೇಂದ್ರದ ಜಿಲ್ಲಾ ನೋಡಲ್ ಅಧಿಕಾರಿ ಉತ್ತರಕ್ಕೆ ಕೆರಳಿದ ದಿವ್ಯಾಪ್ರಭು, ಬೇರೆ ಜಿಲ್ಲೆಗಳಲ್ಲ್ಲಿ ಇಲ್ಲದ ಸಮಸ್ಯೆ ನಮ್ಮಲ್ಲಿ ಯಾಕೆಂದು ತರಾಟೆಗೆ ತೆಗೆದುಕೊಂಡರು.
ಪ್ರತಿ ಫಲಾನುಭವಿ ನೋಂದಣಿಗಾಗಿ ಸರ್ಕಾರ ಸಾಮಾನ್ಯ ಸೇವಾ ಕೇಂದ್ರಗಳಿಗೆ 80 ರೂ. ಕೊಡುತ್ತಿದೆ. ಜಿಲ್ಲೆಯ 400 ಸಾಮಾನ್ಯ ಸೇವಾ ಕೇಂದ್ರಗಳ 800 ಕಂಪ್ಯೂಟರ್ ಆಪರೇಟರ್‌ಗಳ ಪೈಕಿ, 400 ಜನರನ್ನು ನೋಂದಣಿಗೆ ನಿಯೋಜಿಸಬೇಕು. ವಿಶ್ವಕರ್ಮ, ಸವಿತಾ ಸಮಾಜ, ಕಟ್ಟಡ ಕಾರ್ಮಿಕ ಸಂಘದವರು ಬಯಸಿದರೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡ ಬೇಕು. ನೋಂದಣಿ ವರದಿ ನಿತ್ಯ ನೀಡಬೇಕು. ಯೋಜನೆ ಕುರಿತು ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು ಎಂದು ಸೂಚಿಸಿದರು.
ನೋಂದಾಯಿತರಿಗೆ ಪಿಎಂ ವಿಶ್ವಕರ್ಮ ಪ್ರಮಾಣ ಪತ್ರ ಮತ್ತು ಐಡಿ ಕಾರ್ಡ್ ನೀಡಲಾಗುವುದು. ತರಬೇತಿ ಬಯಸುವವರಿಗೆ ಮೊದಲ ಹಂತದಲ್ಲಿ 5 ದಿನಗಳ ಕೌಶಲ ತರಬೇತಿ ನೀಡಲಾಗುವುದು. ತರಬೇತಿ ಅವಧಿ ನಿತ್ಯ 500 ರೂ. ಭತ್ಯೆ ಹಾಗೂ 15 ಸಾವಿರ ರೂ. ಗಳನ್ನು ಸುಧಾರಿತ ಉಪಕರಣಗಳ ಖರೀದಿಗೆ ಕೊಡಲಾಗುವುದೆಂದು ತಿಳಿಸಿದರು.
ಬಳಿಕ ಮೊದಲ ವರ್ಷದಲ್ಲಿ ಬ್ಯಾಂಕ್‌ಗಳ ಮೂಲಕ ಶೇ.5ರ ಬಡ್ಡಿ ದರದಲ್ಲಿ 1 ಲಕ್ಷ ರೂ. ವರೆಗೆ, ಎರಡನೇ ಹಂತದಲ್ಲಿ 2 ಲಕ್ಷ ರೂ. ವರೆಗೆ ಸಾಲ ನೀಡಲಾಗುವುದು. ಡಿಜಿಟಲ್ ವಹಿವಾಟು, ಮಾರುಕಟ್ಟೆ ವಿಸ್ತರಣೆಗೆ ಪ್ರೋತ್ಸಾಹಿಸಲಾಗುವುದು ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಆನಂದ್ ಮಾತನಾಡಿ, ಕಾರ್ಮಿಕ ಇಲಾಖೆ ಇ-ಶ್ರಮ ಪೋರ್ಟಲ್‌ನಲ್ಲಿರುವ ಜಿಲ್ಲೆಯ 18,923 ಜನರ ನೋಂದಣಿಗೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ತಾಪಂ ಇಒಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸವಿತಾ, ವಿಶ್ವಕರ್ಮ ಸಮಾಜ,ಕಟ್ಟಡ ಕಾರ್ಮಿಕರ ಸಂಘ ಮತ್ತಿತರ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.