

ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪದಡಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಇದರೊಂದಿಗೆ ಪ್ರಜ್ವಲ್ ವಿರುದ್ಧ ದಾಖಲಾದ ಪ್ರಕರಣಗಳ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಮತ್ತೊಂದೆಡೆ ಇದೇ ಪ್ರಕರಣದ ಸಂತ್ರಸ್ತೆಯ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಹಂಚಿಕೆ ಸಂಬಂಧ ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ವಿರುದ್ಧವೂ ದೂರು ದಾಖಲಾಗಿದೆ. ಎಸ್‌ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದು, ಪ್ರೀತಂಗೌಡ ಅವರಿಗೆ ಬಂಧನ ಭೀತಿ ಎದುರಾಗಿದೆ.
ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯು ನೀಡಿದ ದೂರು ಆಧರಿಸಿ ಪ್ರಜ್ವಲ್ ವಿರುದ್ಧ ಸಿಐಡಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಲೈಂಗಿಕ ಕಿರುಕುಳ, ಮಹಿಳೆಯ ನಿರಾಸಕ್ತಿ ಹೊರತಾಗಿಯೂ ಸಂವಹನ ಅಥವಾ ಸಂಪರ್ಕಕ್ಕೆ ಯತ್ನ, ಮಹಿಳೆಯ ಮೇಲೆ ಬಲ ಪ್ರಯೋಗಿಸಿ ಅಥವಾ ಹಲ್ಲೆ ಮಾಡಿ ವಿವಸವಾಗುವಂತೆ ಒತ್ತಾಯಿಸುವುದು, ಅಪರಾಧ ಸಂಚು ಆರೋಪದಡಿ ಪ್ರಜ್ವಲ್ ವಿರುದ್ಧ ದೂರು ದಾಖಲಿಸಲಾಗಿದೆ. ಈಗಾಗಲೇ ಆತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರಜ್ವಲ್‌ಗೆ ಈ ನಾಲ್ಕನೇ ಪ್ರಕರಣ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.
ಲೈಂಗಿಕ ದೌರ್ಜನ್ಯಕ್ಕೆ ಸಂತ್ರಸ್ತೆಯ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಹಂಚಿಕೆ ಆರೋಪದಡಿ ಪ್ರೀತಂಗೌಡ, ಅವರ ಆಪ್ತರಾದ ಕಿರಣ್ ಮತ್ತು ಶರತ್ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಪ್ರಜ್ವಲ್ ಮೊದಲ ಆರೋಪಿಯಾದರೆ, ಪ್ರೀತಂಗೌಡ ನಾಲ್ಕನೇ ಆರೋಪಿಯಾಗಿದ್ದಾರೆ. ಪ್ರೀತಂಗೌಡ ವಿರುದ್ಧ ಪೆನ್‌ಡ್ರೈವ್ ಖರೀದಿ ಮಾಡಿಸಿ ಹಂಚಿದ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಅಧಿಕಾರಿಗಳು ಪ್ರೀತಂಗೌಡಗೆ ನೋಟಿಸ್ ಜಾರಿ ಮಾಡಿದ್ದು, ಅವರಿಗೆ ಬಂಧನ ಭೀತಿ ಎದುರಾಗಿದೆ.
ಮತ್ತೆ ಎಸ್‌ಐಟಿ ಕಸ್ಟಡಿಗೆ
‘‘ನನ್ನ ಇಚ್ಛೆಗೆ ವಿರುದ್ಧವಾಗಿ ಖಾಸಗಿ ಕ್ಷಣದ ವಿಡಿಯೋ ಚಿತ್ರೀಕರಿಸಿ ಕಿರುಕುಳ ನೀಡಲಾಗಿದೆ. ಖಾಸಗಿ ವಿಡಿಯೋ ಸೆರೆ ಹಿಡಿದು ಪೆನ್‌ಡ್ರೈವ್ ಮೂಲಕ ಹರಿಬಿಡಲಾಗಿದೆ. ಇದಕ್ಕೆ ಪ್ರಜ್ವಲ್ ಮೂಲ ಕಾರಣ,’ ಎಂದು ದೂರುದಾರ ಸಂತ್ರಸ್ತೆ ಆರೋಪಿಸಿದ್ದಾರೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ನ್ಯಾಯಾಂಗ ಬಂಧನದಲ್ಲಿದ್ದ ಪ್ರಜ್ವಲ್‌ನನ್ನು ಈ ಹೊಸ ಪ್ರಕರಣದ ವಿಚಾರಣೆಗಾಗಿ ಎಸ್‌ಐಟಿ ಅಧಿಕಾರಿಗಳು ಬಾಡಿ ವಾರಂಟ್ ಮೇಲೆ ಮಂಗಳವಾರ ಮತ್ತೆ ನಾಲ್ಕು ದಿನ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಪ್ರಜ್ವಲ್‌ನನ್ನು ೪೨ನೇ ಎಸಿಎಂಎಂ ಕೋರ್ಟ್ ಜೂ.೨೯ರವರೆಗೆ ಎಸ್‌ಐಟಿ ಅಧಿಕಾರಿಗಳ ಕಸ್ಟಡಿಗೆ ನೀಡಿದೆ. ಇದರ ಬೆನ್ನಲ್ಲೇ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್‌ನನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಸಿಐಡಿ ಕಚೇರಿಗೆ ಕರೆತಂದು ವಿಚಾರಣೆ ಆರಂಭಿಸಿದ್ದಾರೆ.
ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಹಂಚಿಕೆ ಹಿಂದೆ ಪ್ರೀತಂಗೌಡ ಮತ್ತು ಅವರ ಸಹಚರರಾದ ಶರತ್, ಕಿರಣ್‌ರ ಪಾತ್ರವಿರುವ ಆರೋಪ ಕೇಳಿಬಂದಿದೆ. ಹೀಗಾಗಿ, ಅವರ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಿದ್ದೇವೆ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.