

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಇತರೆ ಆರೋಪಿಗಳ ವಿರುದ್ಧದ ವಿಚಾರಣೆಗೆ ತಡೆ ನೀಡಲಾಗಿದೆ ಎನ್ನುವ ಆಧಾರದಲ್ಲಿ ತಮಗೆ ಜಾಮೀನು ಕೋರಲಾಗದು ಎಂದು ಹೈಕೋರ್ಟ್ ಹೇಳಿದೆ.
ಮೊದಲನೇ ಅತ್ಯಾಚಾರ ಪ್ರಕರಣದಲ್ಲಿ 2ನೇ ಬಾರಿ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರ ಏಕಸದಸ್ಯ ಪೀಠ ನಡೆಸಿತು.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ ಆರೋಪಿತ ಅತ್ಯಾಚಾರವು 2021ರಲ್ಲಿ ನಡೆದಿದ್ದು, ನಾಲ್ಕೂವರೆ ವರ್ಷಗಳ ಬಳಿಕ ದೂರು ದಾಖಲಿಸಲಾಗಿದೆ. ಇದಕ್ಕೆ ಯಾವುದೇ ವಿವರಣೆ ನೀಡಲಾಗಿಲ್ಲ. ಇವೆಲ್ಲವನ್ನೂ ಪರಿಗಣಿಸಿ ಅರ್ಜಿದಾರರಿಗೆ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರದ ಪರ ವಕೀಲರು ವಾದ ಮಂಡಿಸಿ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ಸುಪ್ರೀಂ ಕೋರ್ಟ್‌ನಲ್ಲೂ ತಿರಸ್ಕೃತವಾಗಿತ್ತು. ಆನಂತರ ಯಾವುದೇ ಬದಲಾವಣೆಯಾಗಿಲ್ಲ.
ಇತರೆ ಆರೋಪಿಗಳ ವಿರುದ್ಧದ ಪ್ರಕರಣ ತಡೆಯಾಜ್ಞೆಯಾಗಿದೆ. ಪ್ರಜ್ವಲ್ ವಿರುದ್ಧ ನಾಲ್ಕು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂದರು.
ಈ ವೇಳೆ ಪ್ರತಿಕ್ರಯಿಸಿದ ಪೀಠವು ಆರೋಪಿಗಳ ವಿರುದ್ಧದ ವಿಚಾರಣೆಗೆ ತಡೆಯಾಜ್ಞೆ ಇದ್ದರೂ ನಿಮ್ಮ (ಪ್ರಜ್ವಲ್) ವಿರುದ್ಧ ನಂಬಲರ್ಹ ಸಾಕ್ಷಿಗಳಿವೆ.
ವಿಶೇಷವಾದ ಕಾರಣ ತೋರದ ಹೊರತು ಜಾಮೀನು ಹೇಗೆ ನೀಡಲು ಸಾಧ್ಯ? ನಿಮ್ಮ ವಾದ ಆಲಿಸಲಾಗುವುದು ಎಂದಿತು. ಅಲ್ಲದೇ, ಆಕ್ಷೇಪಣೆ ಸಲ್ಲಿಸಲು ಪ್ರಾಸಿಕ್ಯೂಷನ್‌ಗೆ ಅನುಮತಿಸಿ, ವಿಚಾರಣೆಯನ್ನು ನ್ಯಾಯಾಲಯವು ಏ.15ಕ್ಕೆ ಮುಂದೂಡಿತು.