

ನಗರದ ಉದಯಗಿರಿ ಪೊಲೀಸ್ ಠಾಣೆ ಮೇಲೆ ನಡೆದ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಪೊಲೀಸರಿಗೆ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇನೆಯೇ ಹೊರತು ಪ್ರಚೋದನೆ ಮಾಡುವ ಕೆಲಸ ಮಾಡಿಲ್ಲ. ಆದರೂ ನನ್ನ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಂಡ ಮುಸ್ಲಿಮರು ಸಾವಿರಾರು ಸಂಖ್ಯೆಯಲ್ಲಿ ಸೇರಿಕೊಂಡು ಪೊಲೀಸರ ಮೇಲೆ ಆಕ್ರಮಣ ಮಾಡಿದರು. ಘಟನೆ ಬೆನ್ನಲ್ಲೇ ಆರ್.ಅಶೋಕ್ ಅವರ ಜತೆ ನಾನೂ ಪೊಲೀಸ್ ಠಾಣೆಗೆ ಭೇಟಿ ನೀಡಿ ಪೊಲೀಸರಿಗೆ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡಿದೆವು. ಪೊಲೀಸರ ಬಗ್ಗೆ ಮೆಚ್ವುಗೆ ಮಾತನಾಡಿದೆವು. ಧೈರ್ಯದಿಂದ ಇರುವಂತೆ ತಿಳಿಸಲಾಗಿತ್ತು. ಇದು ಪ್ರಚೋದನಕಾರಿ ವಿಚಾರನಾ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಬಂದ ನಂತರ ನನ್ನ ಮೇಲೆ ಹಲವು ಎಫ್‌ಐಆರ್ ದಾಖಲು ಮಾಡಿದ್ದಾರೆ. ಈಗ ಉದಯಗಿರಿಯಲ್ಲೂ ಮಾಡಿದ್ದಾರೆ. ವರುಣ, ಶಿಗ್ಗಾವಿ, ಬಸವೇಶ್ವರನಗರ, ಮಾಗಡಿ ಸೇರಿದಂತೆ ಎಲ್ಲ ಕಡೆ ನನ್ನ ವಿರುದ್ಧ ಎಫ್‌ಐಆರ್ ಆಗಿದೆ. ಈ ರೀತಿ ಸಾಲು ಸಾಲು ಎಫ್‌ಐಆರ್ ದಾಖಲಿಸಿ ನನ್ನ ಆತ್ಮಸ್ಥೈರ್ಯ ಕುಗ್ಗಿಸಬೇಕು, ಮನೆಯಿಂದ ಹೊರಬರಬಾರದು ಎಂಬ ಉದ್ದೇಶದಿಂದ ಈ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಸೈಫ್ ಅಲಿಖಾನ್‌ಗೆ ನಾಲ್ಕು ಮಕ್ಕಳಿದ್ದಾರೆ. ಜನೋತ್ಪಾದನೆ ಅವರಿಂದ ಸೃಷ್ಟಿ ಆಗುತ್ತಿದೆ ಎಂದಾದ ಮೇಲೆ ಹೇಳಿದ್ದು ತಪ್ಪೇನಿದೆ. ಎಲ್ಲವನ್ನೂ ದೇವರು ಕೊಟ್ಟ, ದೇವರೆ ನೋಡಿಕೊಳ್ಳಲಿ ಅಂತೀರಿ. ಹಾಗಾದರೆ ಸರ್ಕಾರದ ಹಣ ಯಾಕೆ? ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು.
1947ರಲ್ಲಿ ಭಾರತದಲ್ಲಿ ಮುಸ್ಲಿಂ ಸಂಖ್ಯೆ ಎಷ್ಟಿತ್ತು? ಈಗ ಅವರ ಸಂಖ್ಯೆ ಎಷ್ಟಿದೆ? ಬಾಂಗ್ಲಾ, ಪಾಕ್‌ನಲ್ಲಿ ಎಷ್ಟಿದ್ದಾರೆ? ಸತ್ಯ ಹೇಳಿದ್ದಕ್ಕೆ ಪ್ರಕರಣ ಹಾಕಿದ್ದಾರೆ. ಸಿದ್ದರಾಮಯ್ಯ ವಿರುದ್ಧ ನಾನೊಬ್ಬನೇ ದನಿ ಎತ್ತುತ್ತೇನೆ. ಆ ಕಾರಣಕ್ಕೆ ನಾನು ಟಾರ್ಗೆಟ್ ಆಗಿದ್ದೀನಿ ಎಂದರು.