ಪ್ರಗತಿಪರ, ದಲಿತ ಸಂಘಟನೆಗಳ ಒಕ್ಕೂಟ ಧರಣಿ

7
Published on

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆದಿರುವುದನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳು, ದಲಿತ ಸಂಘಟನೆಗಳ ಒಕ್ಕೂಟದಿಂದ ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಮುಂಭಾಗ ಪ್ರತಿಭಟನೆ ನಡೆಯಿತು.

ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ಮಾತನಾಡಿ, ದೇಶದಲ್ಲಿ ಪ್ರಜಾಪ್ರಭುತ್ವ, ಜಾತ್ಯತೀತ ವ್ಯವಸ್ಥೆ ನಾಶ ಮಾಡಿ ಮನುವಾದ ಮರುಸ್ಥಾಪಿಸಲು ಮುಂದಾಗಿರುವುದು ದೊಡ್ಡ ಅಪಾಯಕಾರಿ. ಆರ್‌ಎಸ್‌ಎಸ್ ನೂರು ವರ್ಷ ಪೂರೈಸಿದೆ ಎಂದು ಶತಮಾನೋತ್ಸವ ಆಚರಣೆ ಮಾಡಲಾಗುತ್ತಿದೆ. ಈ ಸಂಘಟನೆ ಯಾವಾಗ ನೋಂದಣಿಯಾಗಿದೆ, ಈ ಸಂಘಟನೆಗೆ ಬರುವ ಹಣದ ಮೂಲ ಯಾವುದು ಎಂಬುದು ಗೊತ್ತಾಗಬೇಕಾಗಿದೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯ ಮೇಲೆ ಶೂ ಎಸೆದು ಅಪಮಾನಿಸುವಂತಹ ಘಟನೆ ನಾಚಿಕೆಗೇಡು. ಮನುವಾದದ ಮನಸ್ಸಿನವರು ಇಂದಿಗೂ ತಮ್ಮ ವಿಷ ಕಾರುತ್ತಿದ್ದಾರೆ ಎಂಬುದಕ್ಕೆ ಇದೊಂದು ಉದಾಹರಣೆ ಎಂದು ಕಿಡಿಕಾರಿದರು.

ರಂಗಾಯಣದ ಮಾಜಿ ನಿರ್ದೇಶಕ ಎಚ್.ಜನಾರ್ದನ್(ಜನ್ನಿ)ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂದಿಗೂ ನ್ಯಾಯಾಂಗದ ಮೇಲೆ ಜನರು ಗೌರವ ಹೊಂದಿದ್ದಾರೆ. ಅಂತಹ ಸ್ಥಾನದಲ್ಲಿ ಕುಳಿತಿರುವ ವ್ಯಕ್ತಿಯ ಮೇಲೆ ಶೂ ಎಸೆದಿದ್ದು ಅತ್ಯಂತ ಖಂಡನೀಯ. ದೇಶದ ಸಂವಿಧಾನ ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು.

ವಕೀಲ ರಾಕೇಶ್ ಕುಮಾರ್ ಅವರನ್ನು ತಕ್ಷಣ ಬಂಧಿಸಬೇಕು. ಒಬ್ಬ ನ್ಯಾಯಮೂರ್ತಿಗೆ ಈ ರೀತಿಯ ಅಗೌರವ ತೋರಿಸುವ ಮನುವಾದಿ ಮನಸ್ಸಿನವರು ಬೇರೆಯವರ ಬಗ್ಗೆ ಇನ್ನೆಷ್ಟು ಅಗೌರವ ತೋರಲ್ಲ ಎಂದು ಆರೋಪಿಸಿದರು.

ಲೀಡ್ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಕೆ.ಎನ್.ಶಿವಲಿಂಗಯ್ಯ, ಅಹಿಂದ ಜವರಪ್ಪ, ಸವಿತಾ ಮಲ್ಲೇಶ್, ಟಿ.ಗುರುರಾಜ್, ಪ್ರೊ.ಪಂಡಿತಾರಾಧ್ಯ, ಪ್ರೊ.ಕೆ.ಎಂ.ಜಯರಾಮಯ್ಯ, ಲಕ್ಷ್ಮಣ್ ಹೊಸಕೋಟೆ, ಹರಿಹರ ಆನಂದಸ್ವಾಮಿ, ಕೆ.ಆರ್.ಗೋಪಾಲಕೃಷ್ಣ, ಜಯರಾಮ್, ಜಗದೀಶ್ ಸೂರ್ಯ, ಹೊಸಕೋಟೆ ಬಸವರಾಜು, ಉಗ್ರನರಸಿಂಹೇಗೌಡ, ಸುಬ್ರಹ್ಮಣ್ಯ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net