

ಚಿತ್ರದುರ್ಗ: ಪ್ರಗತಿಗೆ ಶಿಕ್ಷಣ ತುಂಬಾ ಅಗತ್ಯವಾಗಿದ್ದು, ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ನಿರತರಾಗಬೇಕು ಎಂದು ಡಿಡಿಪಿಐ ಎಂ.ಆರ್.ಮಂಜುನಾಥ್ ಸಲಹೆ ನೀಡಿದರು.
ಜಿಲ್ಲಾ ಆರ್ಯ ಈಡಿಗರ ಸಂಘ, ಬ್ರಹ್ಮಶ್ರೀ ಜ್ಞಾನಕುಟೀರ ಶಿಕ್ಷಣ, ಕಲಾ, ಸಾಂಸ್ಕೃತಿಕ ಸಂಸ್ಥಾನದಿಂದ ಭಾನುವಾರ ಜಿಲ್ಲಾ ಈಡಿಗರ ವಿದ್ಯಾರ್ಥಿ ನಿಲಯದಲ್ಲಿ ಸಮಾಜದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬಡತನವಿದ್ದರೂ ಕಷ್ಟಪಟ್ಟು ಓದಿ ಅನೇಕರು ಸಮಾಜದಲ್ಲಿ ಉನ್ನತ ಅಧಿಕಾರಿಗಳಾಗಿದ್ದಾರೆ. ಆದರೆ, ಇಂದು ಪಾಲಕರು ಎಲ್ಲ ರೀತಿಯ ಸೌಲಭ್ಯ ನೀಡಿದರೂ ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿಂದುಳಿದಿರುವುದು ನೋವಿನ ಸಂಗತಿ. ಸಂಘ ಮಕ್ಕಳಿಗಾಗಿ ಉತ್ತಮ ಕಾರ್ಯಕ್ರಮ ಆಯೋಜಿಸಿದ್ದು, ಸದುಪಯೋಗ ಪಡಿಸಿಕೊಳ್ಳಿ ಎಂದು ಕಿವಿಮಾತು ನೀಡಿದರು.
ಬಿಇಒ ನಾಗಭೂಷಣ್ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸುಧಾರಣೆ ಸಾಮಾನ್ಯವಾದುದಲ್ಲ. ಅವರ ಕೊಡುಗೆ ಇಡೀ ಮನುಕುಲವೇ ಮೆಚ್ಚುವಂತದ್ದು. ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕಗಳಿಸುವ ಮೂಲಕ ಆಯೋಜಕರ ಆಶಯ ಈಡೇರಿಸಿ ಎಂದು ಸಲಹೆ ನೀಡಿದರು.
ಹೊಳಲ್ಕೆರೆ ಬಿಇಒ ಶ್ರೀನಿವಾಸ್, ಸಂಘದ ಅಧ್ಯಕ್ಷ ಎಚ್.ಜೀವನ್, ವಿ.ಎಲ್.ಪ್ರಶಾಂತ್, ಸಂಸ್ಥಾನದ ಕಾರ್ಯದರ್ಶಿ ಎಸ್.ರಾಘವೇಂದ್ರ, ಪದಾಧಿಕಾರಿಗಳಾದ ಡಿ.ಮಂಜುನಾಥ್, ಟಿ.ಮಂಜುನಾಥ್, ಅನುರಾಧಾ ರವಿಕುಮಾರ್, ಸ್ವಾಮಿ, ಈ.ಎನ್.ಲಕ್ಷ್ಮೀಕಾಂತ್ ಇತರರಿದ್ದರು.