ಪೌರಕಾರ್ಮಿಕರ ಸಬಲೀಕರಣಕ್ಕೆ ಅಗತ್ಯ ಕ್ರಮ

03NGD3
Published on


ಮೈಸೂರು : ಪೌರಕಾರ್ಮಿಕರ ಸಬಲೀಕರಣಕ್ಕೆ ಅವಶ್ಯಕವಾದ ನೆರವನ್ನು ಸರ್ಕಾರದಿಂದ ಕೊಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.

ನಂಜನಗೂಡು ನಗರದ ದೇವೀರಮ್ಮನಹಳ್ಳಿ ವೃತ್ತದಲ್ಲಿರುವ ನಂದಿ ಕನ್ವೆನ್ಷನ್ ಹಾಲ್‌ನಲ್ಲಿ ನಗರಸಭೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಪೌರಕಾರ್ಮಿಕರ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ದೇಶದ ಪ್ರಗತಿಯ ದ್ಯೋತಕ ಸ್ವಚ್ಛತೆ. ಅಂತಹ ಸ್ವಚ್ಛತಾ ಕಾರ್ಯದಲ್ಲಿ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರು ನಗರಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಆಧಾರ ಸ್ತಂಭವಾಗಿದ್ದಾರೆ. ದೇಶದ ಸಮಗ್ರ ಅಭಿವೃದ್ಧಿಗೆ ತಮ್ಮ ಅಮೂಲ್ಯ ಕೊಡುಗೆ ನೀಡುತ್ತಿರುವ ಪೌರಕಾರ್ಮಿಕರ ಶ್ರಮಕ್ಕೆ ಸರಿಯಾದ ರೀತಿಯ ಗೌರವ ಸಲ್ಲುವಂತಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕೂಡ ಪೌರಕಾರ್ಮಿಕರ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ. ಜತೆಗೆ ವಾರ್ಷಿಕ 7 ಸಾವಿರ ರೂ. ಪ್ರೋತ್ಸಾಹಧನ ತರಿಸುತ್ತಿರುವುದು ಸಂತಸ ತಂದಿದೆ ಎಂದರು.


ಸದಾಕಾಲ ಸ್ವಚ್ಛತಾ ಕಾರ್ಯದಲ್ಲೇ ನಿರತರಾಗಿರುವ ಪೌರಕಾರ್ಮಿಕರಿಗೆ ಗೌರವ ಸಲ್ಲಿಸಲು ಹಾಗೂ ಅವರ ಪ್ರತಿಭೆ ಅನಾವರಣಗೊಳಿಸಲು ಪೌರಾಡಳಿತ ಇಲಾಖೆಯು ಪೌರಕಾರ್ಮಿಕರ ಹಬ್ಬ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಪೌರಕಾರ್ಮಿಕರು ಕೂಡ ತಮ್ಮ ಕೆಲಸದ ಜಂಜಾಟದ ನಡುವೆಯೂ ಆಟೋಟ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದು ಖುಷಿ ತಂದಿದೆ ಎಂದರು.


ಕಾರ್ಯಕ್ರಮದಲ್ಲಿ 12 ಜನ ಪೌರಕಾರ್ಮಿಕರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಗೀತೆಗಾಯನ, ನೃತ್ಯ ಹಾಗೂ ಸಂಗೀತದ ಮೂಲಕ ಪೌರ ಬಂಧುಗಳು ನೆರೆದಿದ್ದ ಸಭಿಕರನ್ನು ರಂಜಿಸಿದರು. ವಿವಿಧ ಆಟೋಟ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು.


ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭೆ ಪೌರಾಯುಕ್ತ ನಂಜುಂಡಸ್ವಾಮಿ, ನಗರಸಭಾ ಸದಸ್ಯರಾದ ಪ್ರದೀಪ್, ಮಹೇಶ್, ಶ್ವೇತಾಲಕ್ಷ್ಮೀ, ದೇವ, ಖಾಲಿದ್ ಅಹಮದ್, ವಿಜಯಲಕ್ಷ್ಮೀ, ರಿಹಾನಾ ಬಾನು, ಸಿದ್ದರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net