

ಬೀರೂರು: ಪೌರ ಕಾರ್ಮಿಕರಿಗೆ ಮೊದಲು ಯಾವುದೇ ಸೌಲಭ್ಯಗಳು ತಲುಪುತ್ತಿರಲಿಲ್ಲ. ಐಪಿಡಿ ಸಾಲಪ್ಪ ಅವರು ಪೌರಕಾರ್ಮಿಕರ ಕುಂದುಕೊರತೆಗಳ ವರದಿ ಲವಾಗಿ ಪೌರಕಾರ್ಮಿಕರೂ ಎಲ್ಲರಂತೆ ಬದುಕುವಂತಾಗಿದೆ ಎಂದು ಡಿಎಸ್‌ಎಸ್ ರಾಜ್ಯ ಸಂಚಾಲಕ ವೆಂಕಟೇಶ್ ತಿಳಿಸಿದರು.
ಭಾನುವಾರ ಪುರಸಭೆಯಿಂದ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿ, ಪ್ರತಿ 500 ಜನಸಂಖ್ಯೆಗೆ ಒಬ್ಬ ಪೌರಕಾರ್ಮಿಕರಂತೆ ನಿಗದಿಯಾಗಬೇಕು. ಪೌರ ಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸುವ ಜತೆಗೆ ಪೌರಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂದರು.
ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಪಟ್ಟಣದ ಸ್ವಚ್ಛತೆ ಮತ್ತು ಆರೋಗ್ಯವಂತ ಸಮಾಜ ಕಟ್ಟುವಲ್ಲಿ ಪೌರ ಕಾರ್ಮಿಕರ ಸೇವೆ ಅತ್ಯಂತ ಶ್ರೇಷ್ಠ ಹಾಗೂ ಅನನ್ಯವಾಗಿದೆ. ಪೌರ ಕಾರ್ಮಿಕರು ನಿಜವಾದ ಕಾಯಕ ಯೋಗಿಗಳು ಎಂದರು.
ಸರ್ಕಾರ ಪೌರ ಕಾರ್ಮಿಕರಿಗೆ ನೇರ ವೇತನ, ಸ್ವಚ್ಛತಾ ಪರಿಕರಗಳು, ಆರೋಗ್ಯ ತಪಾಸಣೆ, ವಿಮೆ ಸೌಲಭ್ಯಗಳನ್ನು ಕಲ್ಪಿಸುವ ಜತೆಗೆ ಇನ್ನೂ ಹೆಚ್ಚಿನ ಭದ್ರತೆ ಒದಗಿಸಬೇಕು. 2000 ಪೌರ ಕಾರ್ಮಿಕರನ್ನು ಕಾಯಂಗೊಳಿಸುವಲ್ಲಿ ಮುಖ್ಯಮಂತ್ರಿ ಮಹತ್ತರ ನಿರ್ಧಾರ ತೆಗೆದುಕೊಂಡಿರುವುದು ಬಡವರ್ಗದ ಮತ್ತು ಜನಪರವಾದ ಆಡಳಿತ ಮಾಡುತ್ತಿರುವುದನ್ನು ಪ್ರದರ್ಶಿಸುತ್ತಿದೆ. ಜತೆಗೆ ವೇತನ ಪರಿಷ್ಕರಣೆ ಮೂಲಕ ಹೆಚ್ಚುವರಿ ವೇತನ ನಿಗದಿಪಡಿಸುವಂತೆ ಸರ್ಕಾರದೊಂದಿಗೆ ಚರ್ಚಿಸುತ್ತೇನೆ ಎಂದರು.
ಪುರಸಭೆ ಸದಸ್ಯೆ ವನಿತಾ ಮಧು ಬಾವಿಮನೆ ಮಾತನಾಡಿ, ಪೌರ ಕಾರ್ಮಿಕರು ದಣಿವಾಗದ ಕಾಯಕ ಯೋಗಿಗಳು. ಮಳೆ ಇರಲಿ ಬಿಸಿಲಿರಲಿ ದಿನನಿತ್ಯದ ಕಾಯಕವನ್ನು ಚಾಚೂ ತಪ್ಪದೆ ನಿರ್ವಹಿಸಿಕೊಂಡು ಪಟ್ಟಣದ ಸೌಂದರ್ಯ ಹಾಗೂ ನಾಗರಿಕರ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ ಎಂದರು.
ಪೌರಕಾರ್ಮಿಕರ ಸಂಘದ ಅಧ್ಯಕ್ಷೆ ಜಯಮ್ಮ ಮಾತನಾಡಿ, ಪೌರಕಾರ್ಮಿಕರಿಗೆ ನಿವೇಶನ ಕಲ್ಪಿಸಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದರು. ಹಳೇಪೇಟೆ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಪೌರಕಾರ್ಮಿಕರು ಪೂಜೆ ಸಲ್ಲಿಸಿದರು. ಮೆರವಣಿಗೆಯಲ್ಲಿ ಡಿಜೆ ಸದ್ದಿಗೆ ಕುಣಿಯುತ್ತ ಪೌರಕಾರ್ಮಿಕರು ಸಂಭ್ರಮದಲ್ಲಿ ಗುರುಭವನಕ್ಕೆ ಆಗಮಿಸಿದರು.
ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮೀ ಮೋಹನ್, ಉಪಾಧ್ಯಕ್ಷ ಎನ್.ಎಂ.ನಾಗರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್.ರಘು, ಸದಸ್ಯರಾದ ಜ್ಯೋತಿ ಸಂತೋಷ್, ಸಹನಾ, ಬಿ.ಕೆ.ಶಶಿಧರ್, ಬಿ.ಆರ್.ಮೋಹನ್‌ಕುಮಾರ್, ಸಾಯಿ ಕರ್ಮಚಾರಿ ಜಾಗೃತ ಸಮಿತಿ ಸದಸ್ಯೆ ಭವಾನಿ, ಸದಸ್ಯ ಮಾನಿಕ್ ಬಾಷಾ, ಟಿ.ಗಂಗಾಧರ್, ಸುಮಿತ್ರಾ, ಶಾರದಾ, ನಾಮ ನಿರ್ದೇಶಿತ ಸದಸ್ಯರಾದ ಎಂ.ಎಲ್.ಮೋಹನ್‌ಕುಮಾರ್, ಪುಟ್ಟಣ್ಣ, ಆಶ್ರಯ ಸಮಿತಿ ಸದಸ್ಯ ಮುಬಾರಕ್ ಹಾಗೂ ಪೌರಕಾರ್ಮಿಕರು ಇದ್ದರು.