ಪೊಲೀಸ್ ಸಿಬ್ಬಂದಿಗೆ ಲಾಕ್​ಡೌನ್ ರಜೆ ಮಂಜೂರು

Police
Published on

ಬೆಂಗಳೂರು: ಕರೊನಾ ಸೋಂಕು ಲಾಕ್ ಡೌನ್ ಕರ್ತವ್ಯದ ನಡುವೆ ಕೆಲವು ಪೊಲೀಸರಿಗೆ ದೀರ್ಘ ಕಾಲ ರಜೆ ನೀಡಲಾಗಿದೆ. ಆದರೆ, ಹಲವರಿಗೆ ಕೆಲವೇ ದಿನ ರಜೆ ಲಭಿಸಿದೆ.

ವಿಶ್ರಾಂತಿ ಇಲ್ಲದೆ ದುಡಿದ ಅಧಿಕಾರಿ, ಸಿಬ್ಬಂದಿ ತಮ್ಮ ಮತ್ತು ಕುಟುಂಬದ ಸುರಕ್ಷತೆ ಸಲುವಾಗಿ ಒಂದು ವಾರ ರಜೆ ನೀಡುವಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚನೆ ನೀಡಿದ್ದರು. ಈ ಮೇರೆಗೆ ಎಲ್ಲ ವಿಭಾಗದ ಡಿಸಿಪಿ ಕೆಲಸದ ಒತ್ತಡ ಗಮನದಲ್ಲಿಟ್ಟುಕೊಂಡು 5, 2, 3 ದಿನ ಹೀಗೆ ಪ್ರಥಮ ಹಂತದಲ್ಲಿ ರಜೆ ಘೊಷಣೆ ಮಾಡಿದ್ದಾರೆ. ಇದರಿಂದ ಕೆಲವರಿಗೆ ತೃಪ್ತಿ ಇದ್ದರೆ, ಇನ್ನೂ ಹಲವೆಡೆ ಅಸಮಾಧಾನ ವ್ಯಕ್ತವಾಗಿದೆ.

ಕೆಲವು ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿಗೆ ಮಾತ್ರ 5 ದಿನಗಳ ಕಾಲ ರಜೆ ನೀಡಿದ್ದಾರೆ. ಅಧಿಕಾರಿಗಳಿಗೆ 2ನೇ ಹಂತದಲ್ಲಿ ರಜೆ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ. ಸಂಚಾರ ಪೊಲೀಸರಿಗೆ ಕೇವಲ 2 ದಿನ ಮಾತ್ರ ರಜೆ ನೀಡುತ್ತಿದ್ದಾರೆ. ಒಂದು ವಾರ ರಜೆ ನೀಡಿದರೆ ಊರಿಗೆ ಹೋಗುತ್ತಾರೋ ಎಂಬ ಆತಂಕದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.

ಸಂಚಾರ ಪೊಲೀಸರಲ್ಲಿ ಮೂರು ಪಾಳಿ ಇರುವುದರಿಂದ ಹೆಚ್ಚೇನೂ ವ್ಯತ್ಯಾಸ ಕಂಡುಬಂದಿಲ್ಲ. ಸಿವಿಲ್ ಪೊಲೀಸರಲ್ಲಿ ಚೆಕ್​ಪೋಸ್ಟ್ ಮತ್ತು ವಾಹನ ತಪಾಸಣೆಯಲ್ಲಿ ತೊಡಗಿರುವರಿಗೆ 3 ಪಾಳಿಯಲ್ಲಿ ಕೆಲಸ ಮಾಡಿಸುತ್ತಿದ್ದಾರೆ. ಉಳಿದವರು ಎಂದಿನಂತೆ 2 ಪಾಳಿಯಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ.

ರಜೆ ವಂಚಿತ ಅಧಿಕಾರಿಗಳು: ಅಧಿಕಾರಿ ವರ್ಗಕ್ಕೆ ರಜೆ ನೀಡುತ್ತಿಲ್ಲ. ಕೇವಲ ಸಿಬ್ಬಂದಿ ವರ್ಗಕ್ಕೆ ನೀಡಲಾಗುತ್ತಿದೆ. ಇದರಿಂದಾಗಿ ಬಡ್ತಿ ಪಡೆದು ಎಎಸ್​ಐ ಮತ್ತು ಪಿಎಸ್​ಐ ಆಗಿರುವ ಹಿರಿಯರು ರಜೆಯಿಂದ ವಂಚಿತ ರಾಗಿದ್ದಾರೆ. ಸಾಮಾನ್ಯವಾಗಿ ಮೊದಲ ಆದ್ಯತೆ ಇವರಿಗೆ ಸಿಗಬೇಕಿತ್ತು. ಇಳಿವಯಸ್ಸು, ಅನಾರೋಗ್ಯ ಸೇರಿ ಹಲವು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ, ಇವರಿಗೆ 2ನೇ ಹಂತದಲ್ಲಿ ರಜೆ ಕೊಡಲು ಸೂಚನೆ ನೀಡಲಾಗಿದೆ.

2, 3ನೇ ಹಂತದಲ್ಲಿ ಅನುಮಾನ: ಮೊದಲ ಹಂತದಲ್ಲಿ ರಜೆ ಪಡೆದವರೇ ಅದೃಷ್ಟವಂತರು. 2 ಮತ್ತು 3ನೇ ಹಂತದಲ್ಲಿ ಕಾಯುತ್ತಿರುವರಿಗೆ ರಜೆ ಸಿಗುವುದು ಅನುಮಾನವಾಗಿದೆ. ಏ. 20ರ ನಂತರ ಲಾಕ್​ಡೌನ್ ತೆರವಾಗುವ ಸಾಧ್ಯತೆ ಇದೆ. ಈ ವೇಳೆ ಎಲ್ಲರನ್ನು ಕರ್ತವ್ಯಕ್ಕೆ ಬರುವಂತೆ ಸೂಚನೆ ಬರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net