ಪೊಲೀಸ್ ದಂಪತಿ ಅಂತರ್ ಜಿಲ್ಲಾ ವರ್ಗಾವಣೆಗೆ ನಿಯಮ ಸಡಿಲಿಕೆ; ಡಾ.ಪರಮೇಶ್ವರ

dr gp
Published on

ಬೆಂಗಳೂರು: ಪೊಲೀಸ್ ದಂಪತಿಗಳ ಅಂತರ್ ಜಿಲ್ಲಾ ವರ್ಗಾವಣೆಗೆ ಕೆಲ ನಿಯಮ ಸಡಿಲಿಕೆಗೆ ಕ್ರಮ ತೆಗೆದುಕೊಳ್ಳುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಈಗಿರುವ ನಿಯಮಗಳು ಕಠಿಣವಾಗಿದ್ದು, ಅದನ್ನು ಸಡಿಲಗೊಳಿಸಬೇಕಿದೆ. ಪತಿ-ಪತ್ನಿಯರು, ಉತ್ತರ ಕರ್ನಾಟಕ ಭಾಗದವರು ಎಂಟತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಸ್ವಾಭಾವಿಕವಾಗಿ ಅವರಿಗೆ ತಮ್ಮ ಊರುಗಳ ಕಡೆ ಕೆಲಸ ಮಾಡಬೇಕೆಂಬ ಆಸೆ ಇರುತ್ತದೆ. ಹಾಗಾಗಿ ಹೇಗೆ ಅವಕಾಶ ಮಾಡಬೇಕು ಎಂಬ ಕುರಿತು ಚಿಂತಿಸಿ, ನಿಯಮ ಸಡಿಲಿಸಲು ಕಾನೂನು ತಿದ್ದುಪಡಿ ಮಾಡುತ್ತೇವೆ ಎಂದರು.

ಧಮ್ಕಿ ಹಾಕಿದರೆ ವರದಿ ನಿಲ್ಲಿಸುವರೆ?

ಜಾತಿಗಣತಿ ತೆಗೆದುಕೊಳ್ಳಲಿ ನೋಡುತ್ತೇವೆ ಎಂದು ಎಚ್.ಡಿ.ಕುಮಾರಸ್ವಾಮಿ ಅವರು ಧಮ್ಕಿ ಹಾಕಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಾಕತ್, ಧಮ್ಕಿಗಳನ್ನು ಪ್ರತಿನಿತ್ಯ ರಾಜಕಾರಣದಲ್ಲಿ ಕೇಳುತ್ತಿರುತ್ತೇವೆ. 168 ಕೋಟಿ ರೂ. ಖರ್ಚು ಮಾಡಿ ಜಾತಿಗಣತಿ ವರದಿ ಸಿದ್ಧಪಡಿಸಲಾಗುತ್ತಿದೆ. ಧಮ್ಕಿ ಹಾಕಿದರೆ ವರದಿ ತೆಗೆದುಕೊಳ್ಳುವುದನ್ನು ನಿಲ್ಲಿಸಿಬಿಡುತ್ತಾರಾ? ವರದಿ ಸಿದ್ಧಪಡಿಸುವ ಕಾರ್ಯ ಕೊನೆ ಹಂತದಲ್ಲಿರುವುದರಿಂದ ಆಯೋಗ ಕಾಲಾವಕಾಶ ಕೇಳಿರಬಹುದು. ಹೀಗಾಗಿ ಮುಖ್ಯಮಂತ್ರಿಯವರು ಆಯೋಗಕ್ಕೆ ಸಮಯ ನೀಡಿದ್ದಾರೆ ಎಂದು ಹೇಳಿದರು.

ಐದೂ ಗ್ಯಾರಂಟಿ ಅನುಷ್ಠಾನ

ನಮ್ಮ ಪಕ್ಷ ಐದು ಗ್ಯಾರಂಟಿ ಯೋಜನೆಗಳ ಭರವಸೆ ಕೊಟ್ಟಿತ್ತು. ಎಲ್ಲವನ್ನು ಅನುಷ್ಠಾನ ಮಾಡಿದ್ದೇವೆ. ಕಳೆದ ಬಾರಿ 8 ತಿಂಗಳಿಗೆ 36 ಸಾವಿರ ಕೋಟಿ ರೂ. ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ 12 ತಿಂಗಳಿಗೆ ನಮ್ಮ ಅಂದಾಜಿನ ಪ್ರಕಾರ 58 ಸಾವಿರ ಕೋಟಿ ರೂ. ಖರ್ಚಾಗಲಿದೆ ಎಂದರು.

ಸೋನಿಯಾ ಪ್ರತಿನಿಧಿಸಿದರೆ ಸಂತೋಷ

ಸೋನಿಯಾ ಗಾಂಧಿ ಅವರು ರಾಜ್ಯದಿಂದ ಪ್ರತಿನಿಧಿಸುತ್ತಿರುವ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಜ್ಯಸಭೆಗೆ ಅಭ್ಯರ್ಥಿಗಳ ಆಯ್ಕೆ ತೀರ್ಮಾನವನ್ನು ಸಾಮಾನ್ಯವಾಗಿ ರಾಜ್ಯದಿಂದ ಮಾಡುವುದಿಲ್ಲ. ಕೆಪಿಸಿಸಿ ಅಧ್ಯಕ್ಷರಾಗಲಿ ಅಥವಾ ಮುಖ್ಯಮಂತ್ರಿಯಾಗಲಿ ಮಾಡುವುದಿಲ್ಲ. ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಈ ಹಿಂದಿನಿಂದಲೂ ಅದೇ ರೀತಿಯಾಗಿ ನಡೆದುಕೊಂಡು ಬರಲಾಗಿದೆ. ರಾಷ್ಟ್ರೀಯ ವರಿಷ್ಟರು ಯಾರನ್ನು ಎಲ್ಲಿಂದ ಪ್ರತಿನಿಧಿಸಲು ಸೂಚಿಸುತ್ತಾರೋ ಅವರಿಗೆ ಬಿಟ್ಟಿದ್ದು. ಸೋನಿಯಾ ಗಾಂಧಿ ಅವರು ಕರ್ನಾಟಕದಿಂದ ಪ್ರತಿನಿಧಿಸಿದರೆ ಸಂತೋಷದ ವಿಚಾರ ಎಂದು ಡಾ.ಪರಮೇಶ್ವರ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net