

ಉದಯಗಿರಿಯಲ್ಲಿ ಪೊಲೀಸ್ ಠಾಣೆ ಮೇಲೆ ಸೋಮವಾರ ರಾತ್ರಿ ನಡೆದ ಕಲ್ಲುತೂರಾಟದಿಂದ ಪ್ರಕ್ಷುಬ್ಧಗೊಂಡಿದ್ದ ಉದಯಗಿರಿ ಠಾಣಾ ವ್ಯಾಪ್ತಿಯು ಗುರುವಾರ ಸಹಜ ಸ್ಥಿತಿಯತ್ತ ಮರಳಿದೆ.
ವಿವಾದಿತ ಪೋಸ್ಟ್‌ನಿಂದಾಗಿ ನೆಮ್ಮದಿ ಕಳೆದುಕೊಂಡಿದ್ದ ಸಾಂಸ್ಕೃತಿಕ ನಗರಿ ಮೈಸೂರು, ಪೊಲೀಸರ ಸಕಾಲಿಕ ಕ್ರಮದಿಂದಾಗಿ ಗುರುವಾರದ ವೇಳೆಗೆ ಬಹುತೇಕ ಶಾಂತಗೊಂಡಿತು.
ಪ್ರತಿಭಟನಾಕಾರರ ಕಲ್ಲೇಟಿನ ನೋವಿನ ನಡುವೆಯೂ ಪೊಲೀಸರು ಕರ್ತವ್ಯ ಮುಂದುವರೆಸಿದರು. ಜನಜೀವನವೂ ಯಥಾಸ್ಥಿತಿಗೆ ಮರಳಿದ್ದು, ಉದಯಗಿರಿಯ ಅದರಲ್ಲೂ ಪ್ರಮುಖವಾಗಿ ಮಹದೇವಪುರ ರಸ್ತೆಯ ಎಲ್ಲ ಅಂಗಡಿಗಳು ತೆರೆದಿದ್ದು, ಎಂದಿನಂತೆ ವ್ಯಾಪಾರ ವಹಿವಾಟಿನಲ್ಲಿ ತೊಡಗಿದವು.
ಪೊಲೀಸ್ ಇಲಾಖೆ ತೆಗೆದುಕೊಂಡ ಸಕಾಲಿಕ ಕ್ರಮ ಇಡೀ ಪ್ರದೇಶವನ್ನು ತಹಬದಿಗೆ ತಂದಿದೆ. ಸದ್ಯ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.
ಧರ್ಮ, ಜಾತಿ, ರಾಜಕೀಯ ಪಕ್ಷಗಳ ಮುಖಂಡರೆನಿಸಿಕೊಂಡವರಿಂದ ತಲೆಗೊಂದು ಮಾತು, ಆಧಾರರಹಿತ ಹೇಳಿಕೆ, ಗಾಳಿಸುದ್ದಿ ಹರಡುವುದು ಸೇರಿದಂತೆ ಒಳಗೊಳಗೆ ಮಸಲತ್ತಿನ ಕಾರ್ಯಗಳು ಅಲ್ಲಲ್ಲಿ ಕಿಡಿ ಹಚ್ಚುವ ಕೆಲಸ ಮಾಡುತ್ತಿವೆ. ಆದರೆ, ಇಡೀ ಪ್ರದೇಶದಲ್ಲಿ ಪೊಲೀಸರು ಟೊಂಕ ಕಟ್ಟಿ ನಿಂತಿರುವುದರಿಂದ ಅಂತಹ ಯಾವುದೇ ಸಾಧ್ಯತೆಗಳು ಆಗಿಲ್ಲ ಎಂಬುದೇ ಸಮಾಧಾನಕರ ಸಂಗತಿ.
ಪೊಲೀಸರು ರಸ್ತೆಗೆ ಸಂಪರ್ಕಿಸುವ ಪ್ರತಿ ಜಂಕ್ಷನ್‌ನಲ್ಲೂ ಬ್ಯಾರಿಕೇಡ್ ಅಳವಡಿಸಿ, ಸಂಚಾರ ದಟ್ಟಣೆ ನಿಯಂತ್ರಿಸಿದರು. ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಕಣ್ಣು ಇಟ್ಟಿದ್ದರು. ಘಟನೆಯಲ್ಲಿ ಪೊಲೀಸರಿಗೆ ಕಲ್ಲು ತಾಗಿ ಗಾಯವಾಗಿತ್ತು. ಇಲಾಖೆಯ ಏಳು ವಾಹನಗಳ ಗಾಜು ಪುಡಿಯಾಗಿ, ಜಖಂಗೊಂಡಿದ್ದವು. ಗಲಾಟೆ ಮಾಡಿದವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ಮಹಜರು ನಡೆಸಿದರು. ಠಾಣೆಯ ಸುತ್ತಲಿನಲ್ಲಿರುವ ಸಿಸಿಟಿವಿ ಕ್ಯಾಮರಾಗಳ 10ಕ್ಕೂ ಹೆಚ್ಚು ಡಿವಿಆರ್‌ಗಳನ್ನು ತಂದು ಪರಿಶೀಲಿಸಿದರು. ಸೀನ್ಸ್ ಆಫ್ ಕ್ರೈಂ ಆಫೀಸರ್ಸ್, ಸಿಸಿಬಿ ತಂಡ, ಪೊಲೀಸ್ ಅಧಿಕಾರಿಗಳ ತಂಡ ತನಿಖೆ ಮುಂದುವರೆಸಿದೆ.
ಹಳೆಯ ಘಟನೆಗಳ ನೆನಪು: 1992ರ ರಾಮ ಜನ್ಮ ಭೂಮಿ ಹೋರಾಟದ ಸಮಯದಲ್ಲಿ ಠಾಣೆಗೆ ಪ್ರತಿಭಟನಾಕಾರರು ನುಗ್ಗಿದ್ದರು. ಅದಾದ ಬಳಿಕ ಇಷ್ಟು ದೊಡ್ಡ ಪ್ರಮಾಣದಲ್ಲಿ ಪೊಲೀಸರನ್ನು ಗುರಿಯಾಗಿಸಿ ಕಲ್ಲು ಎಸೆದಿರುವುದು ಉದಯಗಿರಿ ಪ್ರಕರಣದಲ್ಲೇ ಎಂದು ಹಿರಿಯ ಪೊಲೀಸ್ ಸಿಬ್ಬಂದಿ ನೆನಪಿಸಿಕೊಂಡರು. ಲಾಠಿ ಚಾರ್ಜ್ ಮಾಡುತ್ತಿದ್ದಾಗ ಎದುರಿಂದ ಬರುತ್ತಿದ್ದ ಕಲ್ಲುಗಳು, ನಾವು ಎಲ್ಲಿದ್ದೇವೆ ಎಂದು ದಿಗ್ಭ್ರಮೆಗೊಳ್ಳುವಂತೆ ಮಾಡಿತು ಎಂದು ವಿವರಿಸಿದರು. ಮೈಸೂರಿನಲ್ಲಿ ಈ ಹಿಂದೆ ನಡೆದ ಗಲಭೆಗಳ ಬಗ್ಗೆಯೂ ಅನೇಕರು ನೆನಪಿಸಿಕೊಂಡರು.