ಪೊಲೀಸರ ವೈಫಲ್ಯವಿದ್ದರು ಕ್ರಮ

IMG-20220720-WA0096
Published on

ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಕೆರೂರಿನಲ್ಲಿ ನಡೆದ ಘಟನೆಯಲ್ಲಿ ತಪ್ಪು ಮಾಡಿದವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಎಂದು ಎಡಿಜಿಪಿ ಅಲೋಕಕುಮಾರ ಹೇಳಿದರು.
ಎಸ್ಪಿ ಕಚೇರಿಯಲ್ಲಿ ಬುಧವಾರ ಸಂಜೆ ಸುದ್ದಿಗೋಷ್ಠಿ ಮಾತನಾಡಿದ ಅವರು, ಪ್ರತಿಯೊಬ್ಬರು ಶಾಂತಿ ಕಾಪಾಡಬೇಕು. ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳಬಾರದು. ಕೆರೂರಿನ ಘಟನೆಯಲ್ಲಿ ಪೊಲೀಸರ ವೈಫಲ್ಯವಿದೆ ಅಂತ ದೂರು ಬಂದಿವೆ. ಅಲ್ಲಿಯ ಎರಡು ಸಮುದಾಯದ ಮುಖಂಡರು, ಪೊಲೀಸ್ ಠಾಣಾಧಿಕಾರಿಗಳು, ಸಿಬ್ಬಂದಿಗಳೊಂದಿಗೆ ಚರ್ಚಿಸಲಾಗುವುದು. ವೈಫಲ್ಯ ಕಂಡು ಬಂದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಗುಂಪು ಗಲಾಟೆ ವೇಳೆ ಅಮಾಯಕರ ಬಂಧನವಾಗಬಾರದು. ನಿಜವಾದ ಆರೋಪಿಗಳ ಬಂಧಿ ಸಲು ಕ್ರಮ ವಹಿಸಲಾಗುವುದು.

ಇನ್ನು ಕೆರೂರ ಘಟನೆಯಲ್ಲಿ ಈವರೆಗೆ 26 ಜನರ ಬಂಧನವಾಗಿದೆ. ಪ್ರಮುಖ ಆರೋಪಿ ಯಾಸೀನ್ ಈ ವರೆಗೆ ಸಿಕ್ಕಿಲ್ಲ. ಆತನ ಬಂಧನಕ್ಕೆ ಎಸ್ಪಿ ಅವರಿಗೆ ಸೂಚಿಸಲಾಗಿದೆ. ಶೀಘ್ರದಲ್ಲೇ ಈ ಘಟನೆಗೆ ಕಾರಣರಾದವರನ್ನು ಬಂಧಿಸಲಾಗುವುದು. ಸಮಾಜದಲ್ಲಿ ಶಾಂತಿ ಕಾಪಾಡಲು, ಕಾನೂನು ಸುವ್ಯವಸ್ಥೆ ಬಲಗೊಳಿಸಲು ಸಾರ್ವಜನಿಕರೊಂದಿಗೆ ನಿರಂತರವಾಗಿ ಸಂಪರ್ಕ ಸಭೆ ನಡೆಸಲು ಸೂಚಿಸಲಾಗಿದೆ. ಇದರಿಂದ ಅಹಿತಕರ ಘಟನೆಗಳನ್ನು ತಪ್ಪಿಸಬಹುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net