ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದವನ ಕಾಲಿಗೆ ಗುಂಡು

Crime Logo
Published on

ದರೋಡೆ ಪ್ರಕರಣ ಸಂಬಂಧ ಮಹಜರು ನಡೆಸುವ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಆರೋಪಿಯ ಕಾಲಿಗೆ ಜಯಪುರ ಠಾಣೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಮೈಸೂರು ತಾಲೂಕಿನ ಜಯಪುರದ ಬಳಿ ಶುಕ್ರವಾರ ರಾತ್ರಿ ಆತ್ಮರಕ್ಷಣೆಗಾಗಿ ಪೊಲೀಸರು ಕೇರಳ ಮೂಲದ ಆರೋಪಿ ಆದರ್ಶ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಆರೋಪಿ ನಡೆಸಿದ ದಾಳಿಯಲ್ಲಿ ಎಸ್‌ಐ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ. ಆರೋಪಿ ದಾಳಿ ನಡೆಸಿದ ಪರಿಣಾಮ ಜಯಪುರ ಠಾಣೆ ಎಎಸ್‌ಐ ಪ್ರಕಾಶ್ ಹಾಗೂ ಪೇದೆ ಹರೀಶ್ ಗಾಯಗೊಂಡಿದ್ದು, ಕೆ.ಆರ್. ಆಸ್ಪತ್ರೆಯಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಯ ಎಡಗಾಲಿಗೆ ಗುಂಡು ತಗುಲಿ ಬಿದ್ದಿದ್ದು, ಮೇಟಗಳ್ಳಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಏನಿದು ಪ್ರಕರಣ?:

ಕಳೆದ ಜನವರಿ 20 ರಂದು ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಆರೋಹಳ್ಳಿ ಬಳಿ ಹಾಡುಹಗಲೇ ಕೇರಳ ಮೂಲದ ಉದ್ಯಮಿಯ ಕಾರನ್ನು ಅಡ್ಡಗಟ್ಟಿ ದರೋಡೆ ನಡೆಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಮೂವರನ್ನು ಬಂಧಿಸಿದ್ದಾರೆ. ಇನ್ನೂ ಮೂವರು ಆರೋಪಿಗಳನ್ನ ಕೇರಳದಲ್ಲಿ ಬಂಧಿಸಲಾಗಿದ್ದು , ಈ ಪೈಕಿ ಆದರ್ಶ್ ಸಹ ಒಬ್ಬ. ದರೋಡೆ ನಡೆದ ಸ್ಥಳದ ಬಳಿ ಪೊಲೀಸರಿಗೆ ಕ್ವಾಲಿಸ್ ಕಾರು ದೊರೆತಿತ್ತು. ಇದರ ಮಾಲೀಕ ಆದರ್ಶ್ ಎಂದು ಪತ್ತೆ ಹಚ್ಚಲಾಗಿತ್ತು. ಆದರ್ಶ್ ಹಾಗೂ ಸಂಗಡಿಗರ ಬಂಧನಕ್ಕೆ ಪೊಲೀಸರು ಸಾಕಷ್ಟು ಪ್ರಯತ್ನ ನಡೆಸಿ ಕಾರ್ಯಾಚರಣೆ ನಡೆಸಿದ್ದರಿಂದ ಕೊನೆಗೂ ಆದರ್ಶ್ ಪೊಲೀಸರ ಬಲೆಗೆ ಬಿದ್ದಿದ್ದ.

ಈತನ ಕಾರು ದೊರೆತ ಸ್ಥಳಕ್ಕೆ ಮಹಜರು ನಡೆಸುವ ಸಲುವಾಗಿ ಜಯಪುರ ಠಾಣೆಯ ಎಸ್‌ಐ ಪ್ರಕಾಶ್, ಪಿರಿಯಾಪಟ್ಟಣ ಸರ್ಕಲ್ ಇನ್ಸ್‌ಪೆಕ್ಟರ್ ದೀಪಕ್ ಹಾಗೂ ಇಬ್ಬರು ಸಿಬ್ಬಂದಿಯನ್ನು ಕರೆದೊಯ್ದಿದ್ದಾರೆ.

ಕಾರು ಪತ್ತೆಯಾದ ಸ್ಥಳವನ್ನು ಆರೋಪಿ ಗುರುತಿಸಿದ್ದಾನೆ. ನಂತರ ಮೂತ್ರವಿಸರ್ಜನೆ ನೆಪವೊಡ್ಡಿ ರಸ್ತೆ ಬದಿಯಲ್ಲಿ ನಿಂತಿದ್ದಾನೆ.ಯಾರೋ ಕುಡಿದು ಬಿಸಾಕಿದ್ದ ಬಿಯರ್ ಬಾಟಲಿ ಈತನ ಕೈಗೆ ಸಿಕ್ಕಿದೆ. ಬಾಟಲಿಯಿಂದ ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.

ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಎಸ್ಪಿ ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಮಲ್ಲಿಕ್, ಡಿವೈಎಸ್ಪಿ ಕರೀಂ ರಾವ್ ತರ್, ಸರ್ಕಲ್ ಇನ್ಸ್‌ಪೆಕ್ಟರ್ ಶೇಖರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಜಯಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net