

ಹಾಸನ: ಜಿಲ್ಲೆಯ ವಿವಿಧೆಡೆ ನಡೆದಿದ್ದ ಮನೆಗಳ್ಳತನ ಹಾಗೂ ಸರಗಳ್ಳತನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಸುಮಾರು ಒಂದು ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಡಿಸಿಕೊಂಡಿದ್ದಾರೆ.
ನಗರದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಕಳೆದ ವರ್ಷ ಸೆ.7 ರಂದು ಗ್ರಾನೈಟ್ ಉದ್ಯಮಿ ರಘು ಮನೆಯಲ್ಲಿ ನಡೆದಿದ್ದ 1.28 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳ ಕಳವು ಪ್ರಕರಣವನ್ನು ಸಹ ಭೇದಿಸಲಾಗಿದೆ. ಈ ಪ್ರಕರಣದ ಆರೋಪಿಗಳಾದ ಮಹಮ್ಮದ್ ಖಾಲಿದ್ ಮತ್ತು ಬಾಬು ಎಂಬುವರನ್ನು ಬಂಧಿಸಿ, 78,84,400 ರೂ. ಮೌಲ್ಯದ 1714 ಗ್ರಾಂ ಚಿನ್ನಾಭರಣ ಮಾತ್ರ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಶನಿವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡಸಿ ಮಾಹಿತಿ ನೀಡಿದರು.
ವಿಶೇಷ ತಂಡ ರಚನೆ:
ಈ ಕಳವು ಪ್ರಕರಣ ಭೇದಿಸಲು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ತಮ್ಮಯ್ಯ ಮಾರ್ಗದರ್ಶನ, ಡಿವೈಎಸ್ಪಿ ಜಿ.ವಿ. ಉದಯಭಾಸ್ಕರ್ ಮೇಲುಸ್ತುವಾರಿ ಮತ್ತು ಪೆನ್ಷನ್ ಮೊಹಲ್ಲಾ ಸಿಪಿಐ ರೇಣುಕಾಪ್ರಸಾದ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು. ಈ ತಂಡ ನ.5 ರಂದು ರಾತ್ರಿ 10 ಗಂಟೆ ಸುಮಾರಿಗೆ ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿ ಖಾಲಿದ್‌ನನ್ನು ವಶಕ್ಕೆ ಪಡೆಯಿತು. ನಂತರ ನ.6 ರಂದು ಬೆಳಗ್ಗೆ ಪೆನ್ಷನ್ ಮೊಹಲ್ಲಾ ವೃತ್ತ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡನು. ಈತ ನೀಡಿದ ಸುಳಿವಿನ ಮೇರೆಗೆ ಮತ್ತೊಬ್ಬ ಆರೋಪಿ ಬಾಬು ಎಂಬಾತನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಬಂಧಿತ ಆರೋಪಿ ಮಹಮ್ಮದ್ ಖಾಲಿದ್ (42) ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ಬೀರೂರು ಹೋಬಳಿ ದಾಸಯ್ಯನಗುತ್ತಿ ನಿವಾಸಿ ಆಗಿದ್ದು, ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ, ಬೀರೂರು, ಲಕ್ಕವಳ್ಳಿ, ಸಿಂಗಟಗೆರೆ, ಯಗಟಿ ಹಾಗೂ ಹಾಸನದ ಬೇಲೂರು, ಹಳೇಬೀಡು ಮತ್ತು ಪೆನ್ಷನ್ ಮೊಹಲ್ಲಾ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ 11 ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ವಿವರ ನೀಡಿದರು.
ಅಂತರಜಿಲ್ಲಾ ತಂಡ:
ಮಹಮ್ಮದ್ ಸಾದಿಕ್, ಮಹಮ್ಮದ್ ಖಾಲಿದ್, ಅಮೀರ್ ಅಜ್ಜು ಮತ್ತು ಬಾಬು ಎಂಬ ಅಂತರಜಿಲ್ಲಾ ಕಳ್ಳರ ತಂಡ ಹಲವಾರು ಜಿಲ್ಲೆಗಳಲ್ಲಿ ನಡೆದಿರುವ ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿ ಆಗಿದೆ. ಪ್ರಮುಖ ಆರೋಪಿ ಮಹಮ್ಮದ್ ಸಾದಿಕ್ ಮತ್ತು ಅಮೀರ್ ಸಜ್ಜು ತಲೆಮರೆಸಿಕೊಂಡಿದ್ದಾರೆ. ಮಹಮ್ಮದ್ ಸಾದಿಕ್ ಎಂಬಾತ ವಿವಿಧ ಜಿಲ್ಲೆಗಳಲ್ಲಿ ನಡೆದಿರುವ ಸುಮಾರು 80 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈತ ಪ್ರತಿ ಜಿಲ್ಲೆಯಲ್ಲಿ ಕಳ್ಳರ ತಂಡ ರಚಿಸಿಕೊಂಡು ಅವರಿಂದ ಕೃತ್ಯ ಮಾಡಿಸುತ್ತಿದ್ದಾನೆ. ವಿವಿಧ ಜಿಲ್ಲೆಗಳ ಪೊಲೀಸರು ಈತನ ಹಿಂದೆ ಬಿದ್ದಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದರು.
ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಪೆನ್ಷನ್ ಮೊಹಲ್ಲಾ ಠಾಣೆಯ ವೃತ್ತ ನಿರೀಕ್ಷಕ ರೇಣುಕಾಪ್ರಸಾದ್ ಮತ್ತು ತಂಡವನ್ನು ಅಭಿನಂದಿಸಿ 30 ಸಾವಿರ ರೂ. ಬಹುಮಾನ ಘೋಷಿಸಿರುವುದಾಗಿ ಎಸ್ಪಿ ತಿಳಿಸಿದರು.
ಸರಗಳ್ಳನ ಬಂಧನ:
ನಗರದ ಚನ್ನಪಟ್ಟಣ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಕಳೆದ ಜ.6 ರಂದು ಬೆಳಗಿನ ಜಾವ ಮಹಿಳೆಯೊಬ್ಬರು ರಸ್ತೆ ಬದಿ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬೈಕ್‌ನಲ್ಲಿ ಬಂದ ವ್ಯಕ್ತಿಯು ಮಹಿಳೆಯ ಕೊರಳಲ್ಲಿದ್ದ 15 ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ನಗರಠಾಣೆ ಇನ್ಸ್‌ಪೆಕ್ಟರ್ ರೇವಣ್ಣ ಮತ್ತು ಪಿಎಸ್‌ಐ ಕುಮಾರ್ ನೇತೃತ್ವದ ತಂಡವು, ನಗರದ ದೇವೇಗೌಡನಗರ ಬಡಾವಣೆ ನಿವಾಸಿ ಮಂಜುನಾಥ ಅಲಿಯಾಸ್ ಕೋಳಿ ಮಂಜ ಎಂಬ ಆರೋಪಿಯನ್ನು ಬಂಧಿಸಿದೆ.
ಆರೋಪಿಯು ವಿವಿಧ ಪ್ರಕರಣಗಳಲ್ಲಿ ಕಳವು ಮಾಡಿದ್ದ 314 ಗ್ರಾಂ ಚಿನ್ನ ಮತ್ತು 100 ಗ್ರಾಂ ಬೆಳ್ಳಿ ಸೇರಿದಂತೆ ಸುಮಾರು 15 ಲಕ್ಷ ರೂ. ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದೆ. ಈತ ಹಾಸನ ನಗರ, ಬಡಾವಣೆ ಮತ್ತು ಅರಕಲಗೂಡು ಠಾಣೆ ವ್ಯಾಪ್ತಿಯ 8 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಎಸ್ಪಿ ಮಾಹಿತಿ ನೀಡಿದರು.
ಸ್ಕೂಟರ್ ಕಳ್ಳನ ಬಂಧನ:
ನಗರದ ಮೆಹಬೂಬ್‌ನಗರ ಬಡಾವಣೆ ನಿವಾಸಿ ಜಾಫರ್ ಸಾದಿಕ್ (42) ಎಂಬ ಅಂತರಜಿಲ್ಲಾ ಬೈಕ್ ಕಳ್ಳನನ್ನು ಬಂಧಿಸಿರುವ ಪೆನ್ಷನ್ ಮೊಹಲ್ಲಾ ಠಾಣೆ ಪೊಲೀಸರು, ಆತನಿಂದ ಒಟ್ಟ 4.50 ಲಕ್ಷ ರೂ. ಮೌಲ್ಯದ 15 ಸ್ಕೂಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಪೆನ್ಷನ್ ಮೊಹಲ್ಲಾ ಠಾಣೆ ಪಿಎಸ್‌ಐಗಳಾದ ಎಂ. ದಿನೇಶ್ ಕುಮಾರ್ ಮತ್ತು ಜಿ.ಎನ್. ಲೋಹಿತ್ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದೆ. ಬಂಧಿತ ಆರೋಪಿಯು ಪೆನ್ಷನ್ ಮೊಹಲ್ಲಾ ಠಾಣೆ ವ್ಯಾಪ್ತಿಯ 4 ಪ್ರಕರಣ, ಹಾಸನ ನಗರ ಠಾಣೆಯ 4 ಪ್ರಕರಣ, ಶಿವಮೊಗ್ಗ ಜಿಲ್ಲೆಯ 3 ಪ್ರಕರಣ ಮತ್ತು ಕೆ.ಆರ್.ನಗರದ 3 ಪ್ರಕರಣಗಳಲ್ಲಿ ಭಾಗಿ ಆಗಿದ್ದಾನೆ ಎಂದು ಎಸ್ಪಿ ಹರಿರಾಮ್ ಶಂಕರ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ತಮ್ಮಯ್ಯ, ವೃತ್ತ ನಿರೀಕ್ಷಕರಾದ ರೇಣುಕಾಪ್ರಸಾದ್ ಮತ್ತು ರೇವಣ್ಣ, ಪಿಎಸ್‌ಐಗಳಾದ ಕುಮಾರ್, ಎಂ. ದಿನೇಶ್ ಕುಮಾರ್ ಮತ್ತು ಜಿ.ಎನ್. ಲೋಹಿತ್ ಹಾಗು ಸಿಬ್ಬಂದಿ ಹಾಜರಿದ್ದರು.