

ಮೈಸೂರು: ನಗರದ ಪ್ರಮುಖ ರಸ್ತೆಗಳಲ್ಲಿ ಮೈಸೂರು ನಗರಪಾಲಿಕೆ ಪೇ ಆ್ಯಂಡ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸುವ ಕ್ರಮ ಖಂಡಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವ ಒಕ್ಕೂಟ (ಎಐಡಿವೈಒ)ದಿಂದ ಸಾರ್ವಜನಿಕರಿಂದ ಸಹಿ ಸಂಗ್ರಹಿಸಲಾಯಿತು.
ನಗರದ ಮೂರು ಪ್ರಮುಖ ರಸ್ತೆಗಳಾದ ಡಿ.ದೇವರಾಜ ಅರಸು ರಸ್ತೆ, ಸಯ್ಯಜಿ ರಾವ್ ರಸ್ತೆ ಮತ್ತು ಅಶೋಕ ರಸ್ತೆಗಳಲ್ಲಿ ಪೇ ಆ್ಯಂಡ್ ಪಾರ್ಕಿಂಗ್ ಮಾಡುವುದರಿಂದ ಜನರಿಗೆ ತೊಂದರೆ ಆಗುತ್ತದೆ. ಆದ್ದರಿಂದ ಸಾರ್ವಜನಿಕ ರಸ್ತೆಗಳಲ್ಲಿ ಪೇ ಆ್ಯಂಡ್ ಪಾರ್ಕಿಂಗ್ ವ್ಯವಸ್ಥೆ ಮಾಡಬಾರದು ಎಂದು ಒತ್ತಾಯಿಸಿ ನಗರಪಾಲಿಕೆ ಆಯುಕ್ತರ ಕಚೇರಿಗೆ ಮನವಿ ಸಲ್ಲಿಸಲಾಯಿತು.
ನಗರದ ಕೇಂದ್ರ ಭಾಗಗಳಲ್ಲಿ ವಾಹನ ದಟ್ಟನೆ ನಿಯಂತ್ರಿಸುವ ನೆಪವೊಡ್ಡಿ ಪೇ ಆ್ಯಂಡ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಜನರನ್ನು ಸುಲಿಗೆ ಮಾಡಿದಂತಾಗುತ್ತದೆ. ಪೇ ಆ್ಯಂಡ್ ಪಾರ್ಕಿಂಗ್ ವ್ಯವಸ್ಥೆ ಮಾಡಲು ಮುಂದಾಗಿರುವ ಡಿ. ದೇವರಾಜ ಅರಸು ರಸ್ತೆ, ಸಯ್ಯಜಿ ರಾವ್ ರಸ್ತೆ ಮತ್ತು ಅಶೋಕ ರಸ್ತೆಗಳು ವ್ಯಾಪಾರದ ಪ್ರಮುಖ ಕೇಂದ್ರವಾಗಿದೆ. ಹಾಗಾಗಿ ವರ್ತಕರು, ಸಾವಿರಾರು ಗ್ರಾಹಕರು ನಗರದ ವಿವಿಧ ಬಡಾವಣೆಗಳು ಮತ್ತು ಹಳ್ಳಿಗಳಿಂದಲೂ ದಿನನಿತ್ಯದ ಅಗತ್ಯ ವಸ್ತುಗಳ ವ್ಯಾಪಾರಕ್ಕೆ ಬರುತ್ತಾರೆ . ಮೊದಲೇ ಬೆಲೆ ಏರಿಕೆಯಿಂದ ಹೈರಾಣಾದ ಜನಸಾಮಾನ್ಯರಿಗೆ ಈಗ ಪೇ ಆ್ಯಂಡ್ ಪಾರ್ಕಿಂಗ್ ಬಹಳ ದೊಡ್ಡ ಮಟ್ಟದ ಹೊರೆಯಾಗಲಿದೆ. ಜನತೆಯ ಪ್ರತಿರೋಧದ ನಂತರ ಪಾಲಿಕೆಯು ಈ ನಿರ್ಧಾರವನ್ನು ತಡೆ ಹಿಡಿದಿದೆ. ಆದರೆ ಈ ವ್ಯವಸ್ಥೆಯನ್ನು ಮರು ಜಾರಿಗೊಳಿಸುವ ನಗರ ಪಾಲಿಕೆ ಕ್ರಮವನ್ನು ಹಿಂಪಡೆಯಬೇಕು ಒಕ್ಕೂಟ ಮುಖಂಡರಿಂದ ಆಗ್ರಹಿಸಲಾಯಿತು.
ವಿವಿಧ ರಸ್ತೆಗಳಲ್ಲಿ ಪೇ ಆ್ಯಂಡ್ ಪಾರ್ಕಿಂಗ್ ವಿರೋಧಿಸಿ ವರ್ತಕರು ಮತ್ತು ಸಾರ್ವಜನಿಕರಿಂದ ಸಂಗ್ರಹಿಸಿದ ಸಹಿ ಸಂಗ್ರಹವನ್ನು ಮನವಿ ಪತ್ರದೊಂದಿಗೆ ಪಾಲಿಕೆ ಆಯುಕ್ತರಿಗೆ ಸಲ್ಲಿಸಲಾಯಿತು. ಎಐಡಿವೈಒ ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಆರ್.ಸುನಿಲ್, ಕಾರ್ಯದರ್ಶಿಗಳಾದ ಎಸ್. ಸುಮಾ, ನಿರಂಜನ್ ಹಿರೇಮಠ್, ಎಸ್.ವಿ. ನೀತುಶ್ರೀ ಇತರರು ಇದ್ದರು.