

ಕೋಲಾರ/ಬಂಗಾರಪೇಟೆ: ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಕನ್ನಡವನ್ನೇ ಅಗ್ರಗಣ್ಯ ಭಾಷೆಯನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕಾನೂನು ಜಾರಿಗೊಳಿಸಿ ಕನ್ನಡ ಮತ್ತು ಕನ್ನಡಿಗರ ಮೇಲಾಗುವ ದೌರ್ಜನ್ಯ ತಡೆಗಟ್ಟಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಂ.ಎಸ್.ರಾಮಪ್ರಸಾದ್ ಆಗ್ರಹಿಸಿದರು.
ಬಂಗಾರಪೇಟೆಯಲ್ಲಿ ಮಂಗಳವಾರ ಜಿಲ್ಲಾ ಹಾಗೂ ತಾಲೂಕು ಕಸಾಪ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 9ನೇ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ, ಕರ್ನಾಟಕ ಏಕೀಕರಣಗೊಂಡು 65 ವರ್ಷಗಳಾದರೂ ಕನ್ನಡಕ್ಕೆ ಸೂಕ್ತ ಸ್ಥಾನ-ಮಾನ ಸಿಕ್ಕಿಲ್ಲ, ಆಡಳಿತದಲ್ಲಿ ಕನ್ನಡ ಭಾಷೆ ಬಳಕೆ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ, ನಮ್ಮ ರಾಜ್ಯದಲ್ಲಿ ನಾವೇ ಅಲ್ಪಸಂಖ್ಯಾತರಾಗುವ ಕಾಲ ಸನ್ನಿಹಿತವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಕನ್ನಡಿಗರಾದ ನಾವು ತ್ರಿಭಾಷಾ ಸೂತ್ರ ಒಪ್ಪಲು ಸಾಧ್ಯವಿಲ್ಲ. ಹಿಂದಿ ಹೇರಿಕೆ ಬೇಕಾಗಿಲ್ಲ, ದ್ವಿಭಾಷಾ ಸೂತ್ರ ಜಾರಿಯಾಗಬೇಕು. ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಕಚೇರಿ ಸೇರಿ ಎಲ್ಲ ಬ್ಯಾಂಕ್‌ಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದರು.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತಿದ್ದರೂ ಅನುಷ್ಠಾನ ನಿರೀಕ್ಷಿತ ಮಟ್ಟದಲ್ಲಿ ಕಾರ್ಯಗೊಂಡಿಲ್ಲ, ಈ ಅನ್ಯಾಯ ಸರಿಪಡಿಸುವಂತೆ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರುತ್ತಲೇ ಇದೆ. ಆದರೆ ಕನ್ನಡಿಗರ ಆಸೆ ಈಡೇರಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ತಾಲೂಕಿನ ಐತಿಹಾಸಿಕ ಬೂದಿಕೋಟೆಯನ್ನು ಪ್ರವಾಸಿ ತಾಣವನ್ನಾಗಿಸಲು ಸರ್ಕಾರ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಬೇಕು, ಯರಗೋಳ್ ಡ್ಯಾಂ ಶೀಘ್ರ ಲೋಕಾರ್ಪಣೆಯಾಗಬೇಕು, ಮಳೆ ನೀರನ್ನೇ ಆಶ್ರಯಿಸಬೇಕಾದ ಈ ಜಲಾಶಯಕ್ಕೆ ನದಿ ನೀರು ಹರಿಸಲು ಯೋಜನೆ ರೂಪಿಸಿದರೆ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ ಎಂದರು.
ಮೈಸೂರಿನ ರಾಷ್ಟ್ರೀಯ ಅಧ್ಯಯನ ಸಂಸ್ಥೆ ಮುಖ್ಯಸ್ಥ ಡಾ.ಕುಪ್ಪನಹಳ್ಳಿ ಎಂ.ಬೈರಪ್ಪ ಮಾತನಾಡಿ, ಸಮ್ಮೇಳನ ಹಮ್ಮಿಕೊಳ್ಳುವುದರಿಂದ ನಾಡು-ನುಡಿ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸಲು ಅನುಕೂಲವಾಗುತ್ತದೆ. ಕನ್ನಡ ಸಮ್ಮೇಳನದಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಲ್ಲಿ ನಾಡು-ನುಡಿ ವಿಚಾರ ಅರ್ಥೈಸಿಕೊಳ್ಳಲು ಮತ್ತು ಕನ್ನಡ ನಾಡನ್ನು ಹೇಗೆ ಅಭಿವೃದ್ಧಿಪಡಿಸಬಹುದೆಂದು ತಿಳಿಯಲು ಮಾರ್ಗದರ್ಶನ ಸಿಗಲಿದೆ ಎಂದರು.
ಕನ್ನಡ ವಿಶ್ವದ ಇನ್ನಿತರ ಭಾಷೆಗಳಿಗಿಂತ ಭಿನ್ನವಾಗಿದೆ, ಸಾಹಿತಿಗಳು ಕನ್ನಡದಲ್ಲಿ ರಚಿಸಿರುವ ಸಾಹಿತ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ, ವಚನ ಸಾಹಿತ್ಯ ಅನೇಕ ಭಾಷೆಗಳಲ್ಲಿ ಮುದ್ರಣಗೊಂಡಿರುವುದು ಕರ್ನಾಟಕದ ಹೆಮ್ಮೆ ಎಂದು ಬಣ್ಣಿಸಿದರು.
ತಹಸೀಲ್ದಾರ್ ದಯಾನಂದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಗೋವಿಂದರಾಜು, ಪುರಸಭೆ ಅಧ್ಯಕ್ಷೆ ಗಂಗಮ್ಮ, ತಾಪಂ ಇಒ ವೆಂಕಟೇಶಪ್ಪ, ಅಬಕಾರಿ ನಿರೀಕ್ಷಕಿ ಎಂ.ಆರ್.ಸುಮಾ, ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಲ್.ರಾಮಕೃಷ್ಣ, ಕಸಾಪ ತಾಲೂಕು ಅಧ್ಯಕ್ಷ ಬದರೀನಾಥ್, ಕರವೇ ಅಧ್ಯಕ್ಷ ಕಣಿಂಬೆಲೆ ರಾಮಪ್ರಸಾದ್, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಆರ್.ಅಶ್ವತ್ಥ್, ಕೋಲಾರ ತಾಲೂಕು ಕಸಾಪ ಸಮ್ಮೇಳನಾಧ್ಯಕ್ಷ ಅ.ಕೃ.ಸೋಮಶೇಖರ್, ಸಾಹಿತಿಗಳಾದ ಮೈ.ಸತೀಶ್ ಕುಮಾರ್, ಕವಿ ತಿಪ್ಪೇರಂಗಪ್ಪ, ಕನ್ನಡ ಪರ ಹೋರಾಟಗಾರರಾದ ರಂಗರಾಮಯ್ಯ, ಬಾ.ಹು.ಶೇಖರಪ್ಪ, ಕೆ.ಎಂ.ವಿ.ಪ್ರಸಾದ್, ಕಸಾಪ ಪದಾಧಿಕಾರಿಗಳಾದ ಬ,ನ.ಶಿವಕುಮಾರ್, ವೈ.ರಮೇಶ್, ಮುನಿನಾರಾಯಣ ಇದ್ದರು.
ಶಾಸಕರಿಂದ ಮೆಚ್ಚುಗೆ: ಗಡಿ ತಾಲೂಕುಗಳಲ್ಲಿ ಒಂದಾದ ಬಂಗಾರಪೇಟೆಯಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸುವುದು ಕಷ್ಟವಾಗಿತ್ತು, ಕನ್ನಡಪರ ಹೋರಾಟಗಾರರ 40 ವರ್ಷಗಳ ಸಾರ್ಥಕ ಹೋರಾಟದಿಂದ ಕನ್ನಡದ ಕಂಪು ಎಲ್ಲೆಡೆ ವಿಸ್ತಾರಗೊಂಡಿದೆ. ಕನ್ನಡ ಕೆಲಸಕ್ಕೆ ನನ್ನ ಬೆಂಬಲ ಇದೆ. ತಾಲೂಕಿನ ಜನತೆ ತಮ್ಮ ಮಕ್ಕಳಿಗೆ ಪ್ರಥಮ ಆದ್ಯತೆಯಾಗಿ ಕನ್ನಡ ಕಲಿಸಿ ಜತೆಗೆ ಇನ್ನಿತರ ಭಾಷೆ ಕಲಿಯಲು ಉತ್ತೇಜನ ನೀಡಿದಲ್ಲಿ ನಮ್ಮ ಜಿಲ್ಲೆಯ ಹೆಮ್ಮೆಯ ಸಾಹಿತಿಗಳಾದ ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಿವಿಜಿ ಅವರಂತೆ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಅವಕಾಶವಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಸಾಪದಿಂದ ಜಿಲ್ಲೆಗೆ ಕೊಡುಗೆ: ಕನ್ನಡ ಸಾಹಿತ್ಯ ಪರಿಷತ್ ಕೇವಲ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸದೆ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಹೋರಾಟ ನಡೆಸುತ್ತಿದೆ, ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು, ಬ್ಯಾಂಕುಗಳಲ್ಲಿ ಕನ್ನಡ ಬಳಕೆಯಾಗಬೇಕು, ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಬೇಕೆಂದು ಹೋರಾಟ ನಡೆಸಲಾಗಿದೆ, ಕನ್ನಡಕ್ಕೆ ಕುತ್ತು ಬಂದಾಗ ಕಸಾಪ ಬದ್ಧತೆಯಿಂದ ಕೆಲಸ ಮಾಡಿದೆ, ಮುಂದೆಯೂ ಮಾಡಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ನಾಗಾನಂದ ಕೆಂಪರಾಜು ಹೇಳಿದರು.
ಚಿತ್ರಕಲಾ ಪ್ರದರ್ಶನ: ಚಿತ್ರಕಲಾವಿದರಾದ ವೇದಮೂರ್ತಿ ಮತ್ತು ಮುನಿಯಪ್ಪ ರಚಿಸಿರುವ ಚಿತ್ರಗಳ ಪ್ರದರ್ಶನ ಗಮನ ಸೆಳೆಯಿತು. ಪುಸ್ತಕ ಮಳಿಗೆಗಳಲ್ಲಿ ಕೊಳ್ಳುವವರಿಲ್ಲದೆ ವ್ಯಾಪಾರಿಗಳು ನಿರಾಸೆಗೊಂಡರು. ಕರೊನಾ ಹಿನ್ನೆಲೆಯಲ್ಲಿ ಜನರು ಪರಸ್ಪರ ಅಂತರ ಕಾಯ್ದಕೊಂಡು ಅಸನ ಅಲಂಕರಿಸಿದ್ದರು. ಆರೋಗ್ಯ ಇಲಾಖೆ ರವಿ, ಮಂಜುಳಾ, ಎಎಸೈ ಅಲೆಕ್ಸಾಂಡರ್, ಪುರಸಭೆ ಸಿಬ್ಬಂದಿ ಗೋವಿಂದರಾಜು, ತಾಲೂಕು ಕಚೇರಿಯ ಮಂಜುನಾಥ್, ಪಿಡಿಒ ವಸಂತಕುಮಾರ್, ಚಿತ್ರಾ, ಕಲಾವಿದ ಮಾರುತಿಪ್ರಸಾದ್, ಶಿಕ್ಷಕರಾದ ಬಹದ್ದೂರ್, ರಾಣಿಯಮ್ಮ ಮತ್ತು ಹುಲಿಬೆಲೆಯ ನಂಜಪ್ಪ ಅವರನ್ನು ಸನ್ಮಾನಿಸಲಾಯಿತು.